ಬೆತ್ತಲೆ ಸ್ಥಿತಿಯಲ್ಲಿ ರುಂಡವಿಲ್ಲದ ಮಹಿಳೆಯ ಮೃತದೇಹ ಪತ್ತೆ! ಬೆಚ್ಚಿಬಿದ್ದ ಜನ
Views: 95
ಕನ್ನಡ ಕರಾವಳಿ ಸುದ್ದಿ: ಮುಂಡಗೋಡು ತಾಲೂಕಿನ ಕೊಳಗಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬೆತ್ತಲೆ ಸ್ಥಿತಿಯಲ್ಲಿದ್ದ ರುಂಡವಿಲ್ಲದ ಮಹಿಳೆಯೊಬ್ಬರ ಮೃತದೇಹ ಶುಕ್ರವಾರ ಸಂಜೆ ಪತ್ತೆಯಾಗಿದ್ದು, ಇಡೀ ತಾಲೂಕನ್ನು ಬೆಚ್ಚಿಬೀಳಿಸಿದೆ.
ಮಹಿಳೆಯ ಗುರುತು ಸಿಗದಂತೆ ಮಾಡಲು ಹಂತಕರು ತಲೆಯನ್ನು ಕಡಿದು ತೆಗೆದುಕೊಂಡು ಹೋಗಿರುವ ಸಾಧ್ಯತೆಯಿದೆ.
ಘಟನೆಯ ವಿವರ: ತಾಲೂಕಿನ ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಿ ಅರಣ್ಯಕ್ಕೆ ಗ್ರಾಮದ ಮಹಿಳೆಯೊಬ್ಬರು ಸೌದೆ ತರಲು ಹೋದಾಗ ಈ ಭೀಕರ ದೃಶ್ಯ ಕಂಡುಬಂದಿದೆ. ಮೃತದೇಹವನ್ನು ಕಂಡು ಗಾಬರಿಗೊಂಡ ಆಕೆ ಕಿರುಚುತ್ತಾ ಗ್ರಾಮಕ್ಕೆ ಓಡಿ ಬಂದು ವಿಷಯ ತಿಳಿಸಿದಾರೆ. ಸುಮಾರು 33 ರಿಂದ 35 ವರ್ಷ ವಯಸ್ಸಿನ ಮಹಿಳೆಯನ್ನು ಬೇರೆಡೆ ಹತ್ಯೆ ಮಾಡಿ, ಇಲ್ಲಿ ತಂದು ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಹಂತಕರು ಮಹಿಳೆಯನ್ನು ಎರಡು ದಿನಗಳ ಹಿಂದೆಯೇ ಕೊಲೆ ಮಾಡಿರುವ ಸಾಧ್ಯತೆಯಿದೆ. ಮೃತದೇಹದ ಮೇಲೆ ಮರದ ಟೊಂಗೆ ಹಾಗೂ ಸೊಪ್ಪುಗಳನ್ನು ಹಾಕಿ ಮುಚ್ಚಿ ಹೋಗಿದ್ದಾರೆ.
ಪೊಲೀಸರ ತೀವ್ರ ಶೋಧ
ವಿಷಯ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಗುರುತು ಪತ್ತೆಯಾಗಬಾರದೆಂಬ ಕಾರಣಕ್ಕೆ ಹಂತಕರು ರುಂಡವನ್ನು ಬೇರ್ಪಡಿಸಿ ಹೊತ್ತೊಯ್ದಿದ್ದಾರೆ
ಶವ ಪತ್ತೆಯಾದ ಸ್ಥಳದಲ್ಲಿ ಕತ್ತಲೆ ಆವರಿಸಿದ್ದರಿಂದ, ಪೊಲೀಸರು ಕೃತಕ ಬೆಳಕಿನ ವ್ಯವಸ್ಥೆ ಮಾಡಿಕೊಂಡು ಸ್ಥಳ ಮಹಜರು ನಡೆಸಿದ್ದಾರೆ. ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಕೊಲೆಗೆ ನಿಖರ ಕಾರಣವೇನು? ಕೃತ್ಯದ ಹಿಂದೆ ಯಾರ ಕೈವಾಡವಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.






