ರಾಜಕೀಯ

ಕೊನೆಗೂ ಹೈಕಮಾಂಡ್ ನಾಯಕರ ಭೇಟಿ: ನಾಯಕತ್ವದ ಬಗ್ಗೆ ಸ್ಪಷ್ಟನೆಗೆ ಪಟ್ಟುಹಿಡಿದ ಡಿಕೆಶಿ

Views: 30

ಕನ್ನಡ ಕರಾವಳಿ ಸುದ್ದಿ: ಮುಖ್ಯಮಂತ್ರಿ ಬದಲಾವಣೆ ವಿಷಯ ಮುನ್ನಲೆಗೆ ಬಂದಾಗಿನಿಂದ ಹೈಕಮಾಂಡ್ ಭೇಟಿಗೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ‘ಸುದೀರ್ಘ’ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಈ ಬಾರಿಯ ದೆಹಲಿ ದಂಡಯಾತ್ರೆ ಯಲ್ಲಿ ಡಿ.ಕೆ. ಶಿವಕುಮಾ‌ರ್ ಅವರು ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ನಾಯಕತ್ವದ ಬಗ್ಗೆ ಚರ್ಚಿಸಿದ್ದಾರೆ.

ಎರಡು ದಿನಗಳಿಂದ ದೆಹಲಿ ಪ್ರವಾಸದಲ್ಲಿರುವ ಡಿ.ಕೆ. ಶಿವಕುಮಾ‌ರ್ ಅವರು, ಗುರುವಾರ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.

ಭೇಟಿಯ ವೇಳೆ ನಾಯಕತ್ವ ಬದಲಾವಣೆ ಸೇರಿದಂತೆ, ರಾಜ್ಯ ಕಾಂಗ್ರೆಸ್‌ನಲ್ಲಿ ಇತ್ತೀಚಿನ ದಿನದಲ್ಲಿ ನಡೆಯುತ್ತಿರುವ ಬೆಳವಣಿಗೆ, ಪೂರ್ಣಾವಧಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಆಪ್ತರ ನಿರಂತರ ಹೇಳಿಕೆ, ಶಾಸಕರ ವಿದೇಶ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಡಿ.ಕೆ. ಶಿವಕುಮಾ‌ರ್ ಮಾತನ್ನು ಆಲಿಸಿರುವ, ರಾಹುಲ್ ಗಾಂಧಿ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ.

ಅಸ್ಸಾಂ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಜತೆ ಸೋನಿಯಾಗಾಂಧಿ ಅವರ ನಿವಾಸದಲ್ಲಿ ಮೊದಲಿಗೆ ಪ್ರಿಯಾಂಕಾ ಗಾಂಧಿ ನಂತರ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ಡಿ.ಕೆ. ಶಿವಕುಮಾ‌ರ್, ಅಸ್ಸಾಂ ಚುನಾವಣೆಯ ಚರ್ಚೆ ಬಳಿಕ ರಾಹುಲ್ ಗಾಂಧಿ ಅವರ ಜತೆ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದರು. ರಾಹುಲ್ ಗಾಂಧಿ ಅವರೊಂದಿಗೆ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚಿಸುವಾಗ ಸೋನಿಯಾ. ಪ್ರಿಯಾಂಕಾ ಇಬ್ಬರೂ ಇದ್ದರು ಎಂದು ತಿಳಿದುಬಂದಿದೆ.

ಈ ಸುದೀರ್ಘ ಸಭೆಯಲ್ಲಿ ನಡೆಸಿ ತಮ್ಮ ಪಕ್ಷನಿಷ್ಠೆ, ಪಕ್ಷಸೇವೆ ಎಲ್ಲವನ್ನು ಅವರ ಗಮನಕ್ಕೆ ತಂದು ತಮ್ಮ ಶ್ರಮಕ್ಕೆ ಪ್ರತಿಫಲ ನೀಡಿ ಎಂದು ಮನವಿ ಮಾಡಿದರು ಎನ್ನಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆಗಿರುವ ಅಧಿಕಾರ ಹಂಚಿಕೆಯ ಒಪ್ಪಂದದಂತೆ ನಾವೆಲ್ಲ ನಡೆದುಕೊಳ್ಳಬೇಕಿದೆ.

ಅಧಿಕಾರ ಹಂಚಿಕೆಯ ಜಟಾಪಟಿಗೆ ಆದಷ್ಟು ಬೇಗ ತೆರೆ ಎಳೆಯಿರಿ. ಒಂದು ಸ್ಪಷ್ಟ ತೀರ್ಮಾನವನ್ನು ಶೀಘ್ರ ಪ್ರಕಟಿಸಿ ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕರ ವಿದೇಶ ಪ್ರವಾಸಕ್ಕೆ ಬ್ರೇಕ್

ಈ ನಡುವೆ ಶಾಸಕರ ವಿದೇಶಿ ಪ್ರವಾಸಕ್ಕೆ ಸಂಬಂಧಿಸಿದಂತೆ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಪಕದ ಹೈಕಮಾಂಡ್‌ ಬಳಿ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಮಯದಲ್ಲಿ ಶಾಸಕರ ವಿದೇಶಿ ಪ್ರವಾಸ ಯಾವ ಸಂದೇಶ ರವಾನಿಸಲಿದೆ ಎಂದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಯಾವ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಬೇಡಿ ಎನ್ನುವ ಸಂದೇಶವನ್ನು ಮುಖ್ಯಮಂತ್ರಿ ಸಿದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಶಾಸಕರ ವಿದೇಶ ಯಾತ್ರೆಯನ್ನು ಆಯೋಜಿಸಿದ್ದು ಯಾರು ಎನ್ನುವ ಗೊಂದಲಕ್ಕೆ ಈಗಲೂ ಸ್ಪಷ್ಟನೆ ಸಿಕ್ಕಿಲ್ಲ.

Related Articles

Back to top button
error: Content is protected !!