ಕುಂದಾಪುರ: ಕಂಡ್ಲೂರು ಸೇತುವೆ ಕೆಳಭಾಗ ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: 11 ಮಂದಿ ಬಂಧನ, ದೋಣಿಗಳು ವಶ
Views: 103
ಕನ್ನಡ ಕರಾವಳಿ ಸುದ್ದಿ: ಕಂಡ್ಲೂರು ಸೇತುವೆ ಕೆಳಭಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದವರ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ.
ಕಂಡ್ಲೂರು ಸೇತುವೆ ಕೆಳಭಾಗದಲ್ಲಿ ದೋಣಿಗಳ ಮೂಲಕ ಅಕ್ರಮ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ನದಿಯಿಂದ ಮರಳು ತೆಗೆಯುತ್ತ ದೋಣಿಗಳಲ್ಲಿ ತುಂಬಲಾಗುತ್ತಿರುವುದು ಕಂಡು ಬಂದಿತು. ಪೊಲೀಸರನ್ನು ಗಮನಿಸಿದ ದೋಣಿಯಲ್ಲಿದ್ದವರು ದೋಣಿಗಳನ್ನು ನದಿಯ ಪೊದೆಗಳ ಕಡೆಗೆ ತೆಗೆದುಕೊಂಡು ಹೋಗಿ ಅಡಗಿಸಲು ಯತ್ನಿಸಿದರು. ನಂತರ ಸಿಬ್ಬಂದಿಯ ಸಹಾಯದಿಂದ ನಿಲ್ಲಿಸಿದ್ದ ಸ್ಥಳಕ್ಕೆ ಹೋಗಿ ಮರಳು ತುಂಬಿದ್ದ ನಾಲ್ಕು ದೋಣಿಗಳನ್ನು ವಶಪಡಿಸಿಕೊಳ್ಳಲಾಯಿತು.
ಬಂಧಿತ ಆರೋಪಿಗಳು ಹಳ್ನಾಡು KRIDL ಮರಳು ಧಕ್ಕೆಯಲ್ಲಿ ದಿನಗೂಲಿ ಕೆಲಸಗಾರರಾಗಿದ್ದು, ಧಕ್ಕೆಯ ಮಾಲೀಕ ಸುನಿಲ್ ಶೆಟ್ಟಿ ಹಾಗೂ ಸೂಪರ್‌ವೈಸರ್ ಅಜ್ಮಲ್ ಅವರ ಸೂಚನೆಯಂತೆ ಉತ್ತಮ ಗುಣಮಟ್ಟದ ಮರಳಿಗಾಗಿ ಜಿಯೋ ಫೆನ್ಸಿಂಗ್ ಗಡಿಯನ್ನು ದಾಟಿ ರಾತ್ರಿ ವೇಳೆ ಅಕ್ರಮವಾಗಿ ಮರಳು ತೆಗೆಯುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ರಾಮಶಂಕರ ರಾಜಬೀರ್ (35), ರಾಮ ಕುಮಾರ್ (40), ಗೋವಿಂದ ಚೌದರಿ (26), ಶಿವಮುನಿ (32), ಜುನ್ನ ರಾಜಬೀರ್ (35), ಸತ್ಯಾದೇವ (30),
ಕಮಲೇಶ ನಿಸಾದ್ (35), ಸಂತೋಷ ನಿಸಾದ್ (23), ಓಂ ಪ್ರಕಾಶ ರಾಜಬರ್ (34), ರಮೇಶ್ ರಾಜಬರ್ (35), ಅಜ್ಮಲ್ (ಸೂಪರ್‌ವೈಸರ್) ಬಂಧಿತರು.
ದಾಳಿ ವೇಳೆ ಲಕ್ಷಾಂತರ ರೂ. ಮೌಲ್ಯದ ದೋಣಿಗಳು ಮತ್ತು ಮರಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






