ಯಶವಂತಪುರ- ಮಡಗಾಂವ್ ಶಿವರಾತ್ರಿ ವಿಶೇಷ ರೈಲು ಮಾರ್ಗ ಬದಲಾವಣೆಗೆ ಕುಂದಾಪುರ ಪ್ರಯಾಣಿಕರ ಆಕ್ರೋಶ
Views: 39
ಕನ್ನಡ ಕರಾವಳಿ ಸುದ್ದಿ: ಯಶವಂತಪುರ-ಮಂಗಳೂರು-ಕುಂದಾಪುರ ಮಡಗಾಂವ್ ಶಿವರಾತ್ರಿ ವಿಶೇಷ ರೈಲಿನ ಮಾರ್ಗವನ್ನು ಮೊದಲು ನಿಗದಿಯಾಗಿದ್ದ ಪಡೀಲ್ ಬೈಪಾಸ್ ಮಾರ್ಗದ ಬದಲಾಗಿ, ಮಂಗಳೂರು ಜಂಕ್ಷನ್ ಮೂಲಕ ಸಾಗುವಂತೆ ಬದಲಾಯಿಸಲಾಗಿದೆ. ಇದರಿಂದ ಈ ರೈಲು ಮತ್ತಷ್ಟು ವಿಳಂಬವಾಗಲಿದೆ ಎಂದು ಉಡುಪಿ, ಕುಂದಾಪುರ, ಕಾರವಾರ ಭಾಗದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರಾವಳಿ ಜಿಲ್ಲೆಗಳ ಪ್ರಯಾಣಿಕರ ಬೇಡಿಕೆಯಂತೆ ಈ ರೈಲು ಘೋಷಣೆಯಾಗಿತ್ತು. ಮಧ್ಯಾಹ್ನ 12.40 ಕ್ಕೆ ಯಶವಂತಪುರದಿಂದ ಹೊರಡುವ ಈ ರೈಲು ಮಾರ್ಗ ಬದಲಾವಣೆಯಿಂದ ಮಧ್ಯರಾತ್ರಿ 12.20ಕ್ಕೆ ಉಡುಪಿಗೆ ತಲುಪುವ ಬದಲು, ಈಗ 1.40 ಕ್ಕೆ ಕುಂದಾಪುರಕ್ಕೆ 1ರ ಬದಲಿಗೆ 2.30ರ ವೇಳೆಗೆ ಬರುವಂತಾಗಿದೆ.
ಟಿಕೆಟ್ ಬುಕ್ಕಿಂಗ್ ತೆರೆದ ಅನಂತರ ಸುಮಾರು 200 ರಷ್ಟು ಟಿಕೆಟ್ ಮಾರಾಟವಾಗಿದ್ದು, ಈ ರೀತಿಯಾಗಿ ರೈಲು ಮಾರ್ಗವನ್ನು ಬದಲಾಯಿಸಿರುವುದು ಜನರಲ್ಲಿ ಗೊಂದಲ ಮೂಡಿಸಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೈಲು ಮತ್ತೇ ಜಂಕ್ಷನ್ ಒಳಗೆ ಓಡಿಸಿ ಎಂಜಿನ್ ಬದಲಾಯಿಸುವ, ಅನಗತ್ಯ ಸಮಯ ವ್ಯರ್ಥ ಮಾಡುವ ಮೂಲಕ ಉಡುಪಿ, ಕುಂದಾಪುರ, ಕಾರವಾರ ಭಾಗದ ಪ್ರಯಾಣಿಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ಸಂಸದರಿಗೆ ದೂರು ನೀಡಲಾಗಿದೆ ಎಂದು ಕೊಂಕಣ್ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಗಣೇಶ್ ಪುತ್ರನ್ ತಿಳಿಸಿದ್ದಾರೆ. ಇದು ಈ ಭಾಗದ ಪ್ರಯಾಣಿಕರಿಗೆ ಮಾಡಿರುವ ಅನ್ಯಾಯ. ಈ ತೀರ್ಮಾನ ಕೈಗೊಂಡವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಉತ್ತರ ಕನ್ನಡ ರೈಲ್ವೇ ಸಂಘಟನೆಯ ರಾಜೀವ್ ಗಾಂವ್ಕರ್ ತಿಳಿಸಿದ್ದಾರೆ.






