ಸಾಮಾಜಿಕ

ಮದುವೆ ಮಂಟಪದಲ್ಲಿ ಹೈಡ್ರಾಮಾ…! ತಾಳಿ ಕಟ್ಟುವ ವೇಳೆ ಎಂಟ್ರಿ ಕೊಟ್ಟ ಮೊದಲ ಪತ್ನಿ..

Views: 156

ಕನ್ನಡ ಕರಾವಳಿ ಸುದ್ದಿ: ಕಲ್ಯಾಣ ಮಂಟಪದಲ್ಲಿ ವರ ಮತ್ತು ವಧು ಹಾರ ಬದಲಾಯಿಸಿಕೊಂಡು ಇನ್ನೇನು ತಾಳಿ ಕಟ್ಟಿಸಿಕೊಳ್ಳಲು ಸಜ್ಜಾಗಿದ್ದರು. ಸರಿಯಾಗಿ ಮುಹೂರ್ತದ ಸಮಯಕ್ಕೇ ‘ರಿಯಲ್ ವಿಲನ್’ ಥರ ಎಂಟ್ರಿ ಕೊಟ್ಟ ಮೊದಲ ಪತ್ನಿ ಮದುವೆಯನ್ನು ನಿಲ್ಲಿಸಿ, ಗಂಡನಿಗೆ ಶಾಕ್ ನೀಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿರುವ ಎಸ್.ಎಲ್.ಎನ್ (SLN) ಕನ್ವೆನ್ಷನ್ ಹಾಲ್ ಈ ಹೈಡ್ರಾಮಾಗೆ ಸಾಕ್ಷಿಯಾಗಿದೆ.

ಏನಿದು ಘಟನೆ?

ಬೆಂಗಳೂರು ಮೂಲದ ವರ ಮಂಡ್ಯ ಮೂಲದ ಯುವತಿಯೊಂದಿಗೆ ಎರಡನೇ ಮದುವೆಯಾಗಲು ಸಜ್ಜಾಗಿದ್ದ. ಗುಟ್ಟಾಗಿ ನಡೆಯುತ್ತಿದ್ದ ಈ ಮದುವೆಗೆ ಎರಡೂ ಕಡೆಯ ಸಂಬಂಧಿಕರು ಸಾಕ್ಷಿಯಾಗಿದ್ದರು. ಇನ್ನೇನು ಮಾಂಗಲ್ಯ ಧಾರಣೆ ನಡೆಯಬೇಕಿತ್ತು.

ಆದರೆ, ತನ್ನ ಪತಿ ತನಗೆ ಮೋಸ ಮಾಡಿ ಎರಡನೇ ಮದುವೆಯಾಗುತ್ತಿದ್ದಾನೆ ಎಂಬ ವಿಷಯ ತಿಳಿದ ಮೊದಲ ಪತ್ನಿ ನೇರವಾಗಿ ವಕೀಲರು, ಪೊಲೀಸರು ಹಾಗೂ ತನ್ನ ಸಂಬಂಧಿಕರ ಪಡೆಯೊಂದಿಗೆ ಕಲ್ಯಾಣ ಮಂಟಪಕ್ಕೆ ಲಗ್ಗೆ ಇಟ್ಟಿದ್ದಾರೆ.

ಮದುವೆ ಮಂಟಪದಲ್ಲಿ ನಡೆಯಿತು ಜಟಾಪಟಿ

ತಾಳಿ ಕಟ್ಟುವ ವೇಳೆಗೇ ಪೊಲೀಸರೊಂದಿಗೆ ಮೊದಲ ಪತ್ನಿ ಎಂಟ್ರಿ ಕೊಡುತ್ತಿದ್ದಂತೆ ಮದುವೆ ಮಂಟಪದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿಯುತ್ತಿದ್ದಂತೆ ಎರಡನೇ ಮದುವೆಯಾಗಲು ಬಂದಿದ್ದ ವಧುವಿನ ಕಡೆಯವರಿಗೂ ಶಾಕ್ ಆಗಿದೆ. ಈ ವೇಳೆ ಮಂಟಪದಲ್ಲಿ ಕೆಲಕಾಲ ಮಾತಿನ ಚಕಮಕಿ ಹಾಗೂ ಜಟಾಪಟಿ ನಡೆಯಿತು.

ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು, ವರ ಹಾಗೂ ಆತನ ಕಡೆಯವರಿಗೆ ಕಾನೂನು ಪಾಠ ಮಾಡಿದರು. ಮದುವೆಯನ್ನು ಅಲ್ಲಿಗೆ ನಿಲ್ಲಿಸಿ, ವರ, ಮೊದಲ ಪತ್ನಿ ಹಾಗೂ ಎರಡನೇ ಮದುವೆಗೆ ಸಜ್ಜಾಗಿದ್ದ ಯುವತಿಯ ಮನೆಯವರನ್ನು ಅಮೃತೂರು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!