ಇತರೆ
ಉಡುಪಿ: ನಿಲ್ಲಿಸಿದ ಮರದ ದಾರಂದ ತಲೆ ಮೇಲೆ ಬಿದ್ದು ಕಾರ್ಮಿಕ ಸಾವು
Views: 75
ಕನ್ನಡ ಕರಾವಳಿ ಸುದ್ದಿ: ಮನೆಯ ಮುಖ್ಯದ್ವಾರದ ಮರದ ದಾರಂದ ಬಿದ್ದು ಕಾರ್ಮಿಕ ಬಸಪ್ಪ ಮಾದರ್ (38) ಮೃತಪಟ್ಟಿದ್ದಾರೆ.
ಅವರು ಮೂರು ವಾರಗಳಿಂದ ಕೊರಂಗ್ರಪಾಡಿ ಗ್ರಾಮದ ನಂದಗೋಕುಲ ಎಂಬಲ್ಲಿನ ರಾಘವೇಂದ್ರ ತಂತ್ರಿ ಅವರ ಹೊಸಮನೆ ನಿರ್ಮಾಣಕಾರ್ಯಕ್ಕೆ ಮೇಸ್ತ್ರಿ ರಾಘವೇಂದ್ರ ಅವರೊಂದಿಗೆ ಸಹಾಯಕರಾಗಿ ಗಾರೆ ಕೆಲಸ ಮಾಡಿಕೊಂಡಿದ್ದರು. ದಾರಂದವನ್ನು ರಾಘವೇಂದ್ರ ಮೇಸ್ತ್ರಿ ಹಾಗೂ ಬಸಪ್ಪ ಸೇರಿ ನಿಲ್ಲಿಸಿ ಗೋಡೆಗೆ ಸರಿಯಾಗಿ ಹೊಂದಿಸಿ ಊಟಕ್ಕೆ ಹೋಗಿದ್ದರು. ಬಸಪ್ಪ ಅವರು ಊಟ ಮಾಡಿದ ಬಳಿಕ ಮುಖ್ಯ ದ್ವಾರದ ಎದುರಿನ ಜಗಲಿಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ದಾರಂದವು ಅವರ ತಲೆಯ ಮೇಲೆ ಬಿದ್ದಿತು. ಗಂಭೀರವಾಗಿ ಗಾಯಗೊಂಡ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






