ಮಾಜಿ ಶಾಸಕ, ಧಾರ್ಮಿಕ, ಸಾಮಾಜಿಕ ನೇತಾರ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ
Views: 235
ಕನ್ನಡ ಕರಾವಳಿ ಸುದ್ದಿ: ಮಾಜಿ ಶಾಸಕ, ಕುಂದಾಪುರದ ಹಿರಿಯ ಧಾರ್ಮಿಕ ಹಾಗೂ ಸಾಮಾಜಿಕ ನೇತಾರ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಶನಿವಾರ ಬೆಳಿಗ್ಗೆ ನಿಧನ ನಿಧನರಾದರು.ಅವರಿಗೆ 91 ವರ್ಷ ವಯಸ್ಸಾಗಿತ್ತು.ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಸ್ವಚ್ಛ ಪ್ರಾಮಾಣಿಕ ರಾಜಕಾರಣಕ್ಕೆ ಹೆಸರಾದ ಅಪ್ಪಣ್ಣ ಹೆಗ್ಡೆಯವರು ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು 1960ರಿಂದ 1983ರ ವರೆಗೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ್ದರು.
1983ರಲ್ಲಿ ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಆಚಾರ್ ಅವರ ವಿರುದ್ಧ 24 ಮತಗಳ ಅಂತರದಲ್ಲಿ ಗೆದ್ದ ಅಪ್ಪಣ್ಣ ಹೆಗ್ಡೆ, 1983ರಿಂದ 1994ರ ವರೆಗೆ ಕುಂದಾಪುರ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿ ಜನಪ್ರತಿನಿಧಿಯಾಗಿ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ದೇವೇಗೌಡರಂತಹ ದಳ ನಾಯಕರ ಸಹವರ್ತಿಯಾಗಿದ್ದವರು. ಜನತಾ ಪಕ್ಷ ದಿಂದ ಜನತಾ ದಳ, ನಂತರ ಸಂಯುಕ್ತ ಜನತಾ ದಳದಲ್ಲಿ ಸಕ್ರಿಯರಾಗಿದ್ದ ಇವರು 2001ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ರಾಜಕೀಯದಿಂದ ದೂರ ಉಳಿದುಕೊಂಡಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲೂ ಅವರು ಸಕ್ರಿಯರಾಗಿದ್ದು, ತಾಲೂಕು ಸಹಕಾರಿ ಮಾರಾಟ ಸೊಸೈಟಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ, ಬಸ್ರೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಧಾರ್ಮಿಕ ಕ್ಷೇತ್ರದಲ್ಲಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಯಾಗಿ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಭಕ್ತಾದಿಗಳ ಗೌರವಕ್ಕೆ ಪಾತ್ರರಾಗಿದ್ದರು.
ಅವರ ನಿಧನಕ್ಕೆ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ವಲಯದಲ್ಲಿ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.






