ಕಾಣೆಯಾಗಿದ್ದ ಬಾಲಕ ಪೈಪ್ ಲೈನ್‌ನ ಚೇಂಬರ್‌ನಲ್ಲಿ ಶವವಾಗಿ ಪತ್ತೆ, ತನಿಖೆಗಾಗಿ ಸತ್ಯಾಸತ್ಯತೆ ಪರಿಶೀಲನೆ ಸಮಿತಿ
Views: 104
ಕನ್ನಡ ಕರಾವಳಿ ಸುದ್ದಿ: ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬೆಂಗಳೂರು ಜಲಮಂಡಳಿ ಪೈಪ್ ಲೈನ್‌ನ ಚೇಂಬರ್‌ನಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಬಳಿ ನಡೆದಿದೆ.
ನಗರದ ಕನಕಪುರ ರಸ್ತೆಯಲ್ಲಿ ಪೈಪ್‌ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ತೆರೆದು ಜಲಮಂಡಳಿಯ ಬಿಟ್ಟಿದ್ದ ಕಾಂಕ್ರೀಟ್ ಚೇಂಬರ್‌ಗೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ್ದು, ಮೃತ ಬಾಲಕನನ್ನು ಪ್ರೀತಮ್ ಎಂದು ಗುರುತಿಸಲಾಗಿದೆ.
ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ. ಮಗ ಮನೆಗೆ ಮರಳದ ಕಾರಣ ಕುಟುಂಬಸ್ಥರು ಹಾಗೂ ಸ್ಥಳೀಯರು ಆತಂಕದಿಂದ ಹುಡುಕಾಟ ನಡೆಸುತ್ತಿದ್ದರು. ಇದೇ ವೇಳೆ ಪೈಪ್‌ಲೈನ್ ಕಾಮಗಾರಿಯ ಸ್ಥಳದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದಾಗ, ಚೇಂಬರ್ ಒಳಗೆ ಪ್ರೀತಮನ ಶವ ತೇಲುತ್ತಿರುವುದು ಪತ್ತೆಯಾಗಿದೆ.
ಪೈಪ್‌ಲೈನ್ ಕಾಮಗಾರಿ ಹಲವು ದಿನಗಳಿಂದ ವಿಳಂಬವಾಗಿದ್ದು, ಕಾಮಗಾರಿಯ ನಿರ್ಮಿಸಲಾದ ಮುಚ್ಚಳವೇ ಹಾಕಲಾಗಿರಲಿಲ್ಲ. ಅಲ್ಲದೆ ಯಾವುದೇ ಎಚ್ಚರಿಕಾ ಫಲಕಗಳು, ತಡೆಗೋಡೆಗಳು ಅಥವಾ ಸುರಕ್ಷತಾ ಕ್ರಮಗಳಿಲ್ಲದಿರುವುದರಿಂದ ಈ ಪ್ರದೇಶ ಸಾರ್ವಜನಿಕರಿಗೆ ಅಪಾಯದ ತಾಣವಾಗಿ ಪರಿಣಮಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪ್ರೀತಮ್ ಈ ಮಾರ್ಗದಲ್ಲಿ ಹೋಗುವ ವೇಳೆ ಅನಿರೀಕ್ಷಿತವಾಗಿ ಕಾಲು ಜಾರಿ ಚೇಂಬರ್ ಒಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದ್ದು, ರಾತ್ರಿ ಅಥವಾ ಕಡಿಮೆ ಬೆಳಕಿನ ಸಮಯದಲ್ಲಿ ಈ ಚೇಂಬರ್ ಕಾಣಿಸದಿರುವುದೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್, ಬಾಲಕನ ಸಾವಿಗೆ ಕಾರಣವಾದ ಅಂಶಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತಕ್ಷಣವೇ ಜಾರಿಗೆ ಬರುವಂತೆ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಜಲಮಂಡಳಿಯ ಪ್ರಧಾನ ಮುಖ್ಯ ಅಭಿಯಂತರರ ನೇತೃತ್ವದಲ್ಲಿ ತನಿಖೆ ನಡೆಸಲು ತಂಡವನ್ನು ರಚಿಸಲಾಗಿದ್ದು, ಫೆಬ್ರವರಿ 5ರ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.






