ಶಿಕ್ಷಣ

ಜ.26ರಂದು ಗುರುಕುಲ ವಿದ್ಯಾಸಂಸ್ಥೆಯಲ್ಲಿ “ಗುರುಕುಲ ಕಾರ್ನಿವಲ್” (ಮಕ್ಕಳ ಹಬ್ಬ)

ಗುರುಕುಲ ಕಾರ್ನಿವಲ್ ಕೇವಲ ಹಬ್ಬವಲ್ಲ, ಅದು ಕಲಿಕೆಯೂ, ಸಂಭ್ರಮವೂ ಹಾಗೂ ಎಲ್ಲರನ್ನು ಒಂದಾಗಿ ಕೊಂಡೊಯ್ಯುವ ಕ್ಷಣವಾಗಿದೆ. ಈ ಸಂಭ್ರಮವನ್ನು ಸಾರ್ವಜನಿಕರು, ಊರವರು ಹಾಗೂ ಬಂಧು ಬಳಗದವರು ಅನುಭವಿಸಬೇಕು ಎಂಬುದೇ ನಮ್ಮ ಆಶಯ ----- ಸುಭಾಶ್ಚಂದ್ರ ಶೆಟ್ಟಿ, ಕಾರ್ಯನಿರ್ವಾಹಕರು ಬಾಂಡ್ಯ ಎಜುಕೇಶನಲ್ ಟ್ರಸ್ಟ್ 

Views: 33

ಕನ್ನಡ ಕರಾವಳಿ ಸುದ್ದಿ: ಗುರುಕುಲ ವಿದ್ಯಾಸಂಸ್ಥೆ ಕಳೆದ 20 ವರ್ಷಗಳಿಂದ ಮಕ್ಕಳ ಮನೋಭಾವಕ್ಕೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣದೊಂದಿಗೆ ನಮ್ಮ ನೆಲದ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಬೆಳೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಾಂಡ್ಯ ಎಜುಕೇಶನಲ್ ಟ್ರಸ್ಟ್, ವಕ್ವಾಡಿ ಇದರ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಹೇಳಿದರು.

ಅವರು ಜನವರಿ 22ರಂದು ಗುರುಕುಲ ವಿದ್ಯಾಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಹಾಗೂ ಕ್ರಿಯಾತ್ಮಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಯಾಂಡ್ ಆರ್ಟ್, ಕೈಟ್ ಫೆಸ್ಟಿವಲ್, ಆರ್ಟ್ ಇಂಪ್ಯಾಕ್ಟ್, ಕೃಷಿ ಮೇಳ, ಸಸ್ಯಾಮೃತ, ಸಮ್ಮರ್ ಕ್ಯಾಂಪ್ ಮೊದಲಾದ ವಿಭಿನ್ನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಇದಕ್ಕೆ ಪೂರಕವಾಗಿ ಜನವರಿ 26ರಂದು ಗುರುಕುಲ ವಿದ್ಯಾಸಂಸ್ಥೆಯ ಆವರಣದಲ್ಲಿ ಒಂದು ದಿನದ ಮಕ್ಕಳ ಹಬ್ಬವಾದ “ಗುರುಕುಲ ಕಾರ್ನಿವಲ್” ಅನ್ನು ಆಯೋಜಿಸಲಾಗಿದೆ. ಈ ಕಾರ್ನಿವಲ್ ಪೋಷಕರ ಕನಸು, ಮಕ್ಕಳ ಸಂಭ್ರಮ ಹಾಗೂ ಶಾಲೆಯ ಮೌಲ್ಯಗಳ ಸಂಯೋಜನೆಯಾಗಿ ಮೂಡಿಬಂದಿದೆ. ಇಲ್ಲಿ ಪೋಷಕರು ಕೇವಲ ಪ್ರೇಕ್ಷಕರಾಗಿರದೆ, ಸ್ಟಾಲ್‌ಗಳು, ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಸಂಭ್ರಮದ ಸೃಷ್ಟಿಕರ್ತರಾಗಲಿದ್ದಾರೆ ಎಂದು ತಿಳಿಸಿದರು.

ಶಿಕ್ಷಕರು, ಕಚೇರಿ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರನ್ನೊಳಗೊಂಡ ಸಂಸ್ಕೃತಿ ಜನ್ಯ ಸಾಂಸ್ಕೃತಿಕ ಸಮ್ಮಿಲನದಿಂದ ಕೂಡಿದ ಈ ಕಾರ್ಯಕ್ರಮವನ್ನು ಕರಾವಳಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ‘ಸು–ಪ್ರಮ್–ಸೋ’ ಚಿತ್ರದ ಖ್ಯಾತ ನಟ ರವಿಅಣ್ಣ ಎಂದೇ ಪರಿಚಿತರಾದ ಶನಿಲ್ ಗೌತಮ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್. ಶೆಟ್ಟಿ ಅವರು ವಹಿಸಲಿದ್ದಾರೆ.

ಕಾರ್ನಿವಲ್‌ನಲ್ಲಿ ಮೂರುರಿಂದ ಐದು ವರ್ಷದ ಪುಟಾಣಿಗಳಿಗೆ Prince & Princess ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನ ರೂ.5000 ಮತ್ತು ದ್ವಿತೀಯ ಬಹುಮಾನ ರೂ.3000 ನಗದು ಬಹುಮಾನ ನೀಡಲಾಗುತ್ತದೆ. ಸತತ 216 ಗಂಟೆಗಳ ನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪಡೆದ ವಿದೂಷಿ ದೀಕ್ಷಾ ಅವರಿಂದ ನಾಟ್ಯ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಕುದ್ರೋಳಿಯ ಶ್ರೀಗಣೇಶ ಅವರಿಂದ ಜಾದು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಇದಲ್ಲದೆ ಬೆಂಗಳೂರಿನಿಂದ ವಿಶೇಷ ತರಬೇತಿ ಪಡೆದ ಸಾಹಸ ಕ್ರೀಡೆಗಳಾದ Climbing Wall, Burma Bridge, Zip Line, Net Climbing ಸೇರಿದಂತೆ ಹಲವಾರು ಆಕರ್ಷಣೆಗಳು, Baby Shark Tank, Face Painting, Robotics Corner, ಗಾಳಿಪಟ ತಯಾರಿ ಮತ್ತು ಹಾರಾಟ ಕಾರ್ಯಕ್ರಮಗಳು ನಡೆಯಲಿವೆ. ಪೋಷಕರಿಂದ ಆಹಾರಮೇಳ ಹಾಗೂ ವಿವಿಧ ಮಳಿಗೆಗಳ ವ್ಯವಸ್ಥೆಯೂ ಇರಲಿದೆ.

ಗುರುಕುಲ ಕಾರ್ನಿವಲ್ ಕೇವಲ ಹಬ್ಬವಲ್ಲ, ಅದು ಕಲಿಕೆಯೂ, ಸಂಭ್ರಮವೂ ಹಾಗೂ ಎಲ್ಲರನ್ನು ಒಂದಾಗಿ ಕೊಂಡೊಯ್ಯುವ ಕ್ಷಣವಾಗಿದೆ. ಈ ಸಂಭ್ರಮವನ್ನು ಸಾರ್ವಜನಿಕರು, ಊರವರು ಹಾಗೂ ಬಂಧುಬಳಗದವರು ಅನುಭವಿಸಬೇಕು ಎಂಬುದೇ ನಮ್ಮ ಆಶಯ ಎಂದು ಸುಭಾಶ್ಚಂದ್ರ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕಿ ಶ್ರೀಮತಿ ಅನುಪಮಾ ಎಸ್. ಶೆಟ್ಟಿ, ಗುರುಕುಲ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಡಾ. ರೂಪಾ ಶೆಣೈ ಉಪಸ್ಥಿತರಿದ್ದರು.

 

Related Articles

Back to top button
error: Content is protected !!