ಶ್ರೀಗಳ ಜೊತೆ ನಟಿ ಪಲ್ಲವಿ ಮತ್ತಿಘಟ್ಟ 1 ಗಂಟೆಗಳ ಮಾತುಕತೆ ಸುಳ್ಳು: ಶೃಂಗೇರಿ ಶ್ರೀಮಠದ ಸ್ಪಷ್ಟನೆ
Views: 151
ಕನ್ನಡ ಕರಾವಳಿ ಸುದ್ದಿ: ಕಿರುತೆರೆ ನಟಿ ಹಾಗೂ ಯಕ್ಷಗಾನ ಕಲಾವಿದೆ ಪಲ್ಲವಿ ಮತ್ತಿಘಟ್ಟ ಅವರು ಶೃಂಗೇರಿ ಜಗದ್ಗುರುಗಳ ಜೊತೆಗೆ 1 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣ ಹಾಗೂ ಕೆಲವು ಪತ್ರಿಕೆಗಳಲ್ಲಿ ಹರಿದಾಡಿತ್ತು. ಈ ಕುರಿತು ಶೃಂಗೇರಿ ಶಾರದಾ ಪೀಠವು ಅಧಿಕೃತ ಸ್ಪಷ್ಟನೆ ನೀಡಿದ್ದು, ಸುದ್ದಿಯನ್ನು “ಅಪ್ಪಟ ಸುಳ್ಳು” ಎಂದು ತಳ್ಳಿಹಾಕಿದೆ.
ಶೃಂಗೇರಿ ಮಠದ ಸ್ಪಷ್ಟನೆ ಏನು?
ಶಿರಸಿಯ ಸ್ಥಳೀಯ ಇ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಉದ್ದೇಶಿಸಿ ಪ್ರತಿಕ್ರಿಯಿಸಿರುವ ಶ್ರೀಮಠ, “ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾ ಸನ್ನಿಧಾನಂಗಳವರು ಇತ್ತೀಚಿನ ವರ್ಷಗಳಲ್ಲಿ ಭಕ್ತರಿಗೆ ದರ್ಶನ ನೀಡಿ ಅನುಗ್ರಹಿಸುತ್ತಿದ್ದಾರೆಯೇ ಹೊರತು. ಯಾರೊಂದಿಗೂ ದೀರ್ಘವಾಗಿ ಮಾತುಕತೆ ನಡೆಸುತ್ತಿಲ್ಲ. ಪಲ್ಲವಿ ಮತ್ತಿಘಟ್ಟ ಅವರು ಸಾಮಾನ್ಯ ಭಕ್ತರಂತೆ ದರ್ಶನ ಪಡೆದಿರಬಹುದು. ಆದರೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಸುಳ್ಳಿನ ಕಂತೆ. ಇಂತಹ ದಾರಿ ತಪ್ಪಿಸುವ ಸುದ್ದಿಗಳನ್ನು ಪ್ರಕಟಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ” ಎಂದು ಮಠ ಎಚ್ಚರಿಸಿದೆ.
ನಟಿ ಪಲ್ಲವಿ ಮತ್ತಿಘಟ್ಟ ಹೇಳಿದ್ದೇನು?
ಈ ಬೆಳವಣಿಗೆಯ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸುದೀರ್ಘ ಪ್ರತಿಕ್ರಿಯೆ ನೀಡಿರುವ ಪಲ್ಲವಿ ಮತ್ತಿಘಟ್ಟ ಅವರು ಪತ್ರಿಕೆಯ ವರದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಾನು ಒಬ್ಬ ಸ್ವತಂತ್ರ ಪ್ರಜೆ, ನನಗಿಷ್ಟ ಬಂದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಹಕ್ಕಿದೆ. ಇತ್ತೀಚೆಗೆ ನಾನು ಕುಟುಂಬದೊಂದಿಗೆ 20ಕ್ಕೂ ಅಧಿಕ ಕ್ಷೇತ್ರಗಳಿಗೆ ಭೇಟಿ ನೀಡಿರುವುದು ನಿಜ. ಆದರೆ ಶೃಂಗೇರಿ ಶ್ರೀಗಳ ಜೊತೆ ಗಂಟೆಗಳ ಕಾಲ ಚರ್ಚಿಸಿದ್ದೇನೆ ಎಂಬುದು ಶುದ್ಧ ಸುಳ್ಳು. ನನ್ನ ವಾಟ್ಸಾಪ್ ಸ್ಟೇಟಸ್ನಲ್ಲಿದ್ದ ಫೋಟೋ ಕದ್ದು, ಅದಕ್ಕೆ ಬಣ್ಣ ಬಳಿದು ಮನಬಂದಂತೆ ಬರೆದಿರುವ ಬಾಲಿಶ ಮನಸ್ಥಿತಿಗಳ ಬಗ್ಗೆ ವಿಷಾದಿಸುತ್ತೇನೆ,” ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೆ, ತಾವು ಕಿರುತೆರೆಯಿಂದ ದೂರ ಸರಿದು ವರ್ಷಗಳೇ ಕಳೆದಿದ್ದರೂ ‘ಖ್ಯಾತ ನಟಿ’ ಎಂದು ಉಲ್ಲೇಖಿಸಿರುವುದರ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಯಾರು ಈ ಪಲ್ಲವಿ ಮತ್ತಿಘಟ್ಟ?
ಪಲ್ಲವಿ ಮತ್ತಿಘಟ್ಟ ಅವರು ಮೂಲತಃ ಯಕ್ಷಗಾನ ಕಲಾವಿದೆಯಾಗಿದ್ದು, ಕಿರುತೆರೆಯಲ್ಲಿಯೂ ಹೆಸರು ಮಾಡಿದ್ದಾರೆ. ‘ಆಕಾಶದೀಪ’, ‘ಮಹಾದೇವಿ’, ‘ಬ್ರಹ್ಮಾಸ್ತ್ರ’, ‘ನೇತ್ರಾವತಿ’ಯಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಉಪೇಂದ್ರ ಅವರ ‘ಸೂಪರ್ ರಂಗ’ ಹಾಗೂ ರವಿಚಂದ್ರನ್ ಅವರ ‘ಪರಮಶಿವ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಪ್ರಸ್ತುತ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.






