ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸರಿಗೆ ಕರೆ ಮಾಡಿದ್ದ ನಿವೃತ್ತ ಯೋಧ ಜೀವಾಂತ್ಯ
Views: 67
ಕನ್ನಡ ಕರಾವಳಿ ಸುದ್ದಿ: ನಿವೃತ್ತ ಯೋಧರೋರ್ವರು ತಲೆಗೆ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿ ಘಟ್ಟದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿ.ಕೆ.ಕಲ್ಲೇಶ್ (60) ಆತ್ಮಹತ್ಯೆಗೆ ಶರಣಾದ ನಿವೃತ್ತ ಯೋಧ. ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಎರಡು ಮದುವೆಯಾಗಿತ್ತು. ಕೆಲಸದಿಂದ ನಿವೃತ್ತಿಯಾಗಿ ಬರುವಾಗಲೇ ಪಿಸ್ತೂಲ್ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದರು. ಘಟನೆಗೂ ಎರಡು ದಿನ ಮೊದಲು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ನಿ ಬಳಿ ಹೇಳುತ್ತಿದ್ದರಂತೆ. ಈ ದುಡುಕಿನ ನಿರ್ಧಾರಕ್ಕೆ ನಿಖರವಾದ ಕಾರಣವೇನು ಎಂದು ತಿಳಿದುಬಂದಿಲ್ಲ.
ಇಂದು ಬೆಳಿಗ್ಗೆ ಸಕಲೇಶಪುರ ಪೊಲೀಸ್ ಠಾಣೆಗೆ ಕರೆ ಮಾಡಿದ್ದ ಕಲ್ಲೇಶ್ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಕೂಡಲೇ ಹಳೇಬೀಡು ಪೊಲೀಸರಿಗೆ ಸಕಲೇಶಪುರ ಪೊಲೀಸರು ಮಾಹಿತಿ ನೀಡಿದ್ದು, ಘಟ್ಟದಹಳ್ಳಿ ಗ್ರಾಮಕ್ಕೆ ಪೊಲೀಸರು ತೆರಳಿದ್ದಾರೆ. ಅಷ್ಟರಲ್ಲಿ ಮನೆಯಲ್ಲಿಯೇ ಪಿಸ್ತೂಲ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






