ಕುಂದಾಪುರ ಎಜುಕೇಶನ್ ಸೊಸೈಟಿ “ಸುವರ್ಣ ಸಂಭ್ರಮ” ವೈಭವದ ಪುರ ಮೆರವಣಿಗೆ
Views: 533
ಕನ್ನಡ ಕರಾವಳಿ ಸುದ್ದಿ:ಕುಂದಾಪುರ ಎಜುಕೇಶನ್ ಸೊಸೈಟಿಗೆ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಎಚ್‌ಎಂಎಂ ಶಾಲೆ, ವಿಕೆಆರ್ ಶಾಲೆ, ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು, ಡಾ। ಬಿ.ಬಿ. ಹೆಗ್ಡೆ ಪದವಿ ಕಾಲೇಜು ಸಂಯುಕ್ತವಾಗಿ ಹಮ್ಮಿಕೊಂಡ ‘ಸುವರ್ಣ ಸಂಭ್ರಮ’ ಕಾರ್ಯಕ್ರಮದ ಪುರ ಮೆರವಣಿಗೆಗೆ ಗುರುವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ಕುಂದಾಪುರ ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್.ರಥದ ಮಾದರಿಯನ್ನು ಎಳೆಯುವುದರ ಮೂಲಕ ಚಾಲನೆ ನೀಡಿದರು.

ಮೆರವಣಿಗೆಗೆ ಚಾಲನೆ ನೀಡಿದ ಸಹಾಯಕ ಕಮಿಷನರ್ ರಶ್ಮೀ ಮಾತನಾಡಿ, ಆರಂಭದ ಹಂತದಿಂದ ಪದವಿವರೆಗೆ ಶಿಕ್ಷಣ ನೀಡುವ ಕುಂದಾಪುರ ಎಜುಕೇಶನ್ ಸೊಸೈಟಿ ಶಿಕ್ಷಣ ಸಂಸ್ಥೆ ಬಿ.ಎಂ. ಸುಕುಮಾರ ಶೆಟ್ಟರ ನೇತೃತ್ವದಲ್ಲಿ 5 ಸಾವಿರ ಮಂದಿಗೆ ವಿದ್ಯಾಭ್ಯಾಸ ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶುಲ್ಕ ರಿಯಾಯಿತಿ ಕೂಡಾ ನೀಡುವ ಮೂಲಕ ಎಲ್ಲರೂ ಸಮಾಜದಲ್ಲಿ ಸುಶಿಕ್ಷಿತರಾಗಬೇಕು ಎಂಬ ಕಳಕಳಿ ಈ ಸಂಸ್ಥೆಗೆ ಇದೆ ಎಂದರು.
ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ವಾರ್ಷಿಕ 60 ಲಕ್ಷ ರೂ.ಗಳಷ್ಟು ಶುಲ್ಕ ರಿಯಾಯಿತಿ ನೀಡಲಾಗುತ್ತಿದೆ. 500 ಮಂದಿಗೆ ಉಚಿತ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ನಮ್ಮ ಸಂಸ್ಥೆಯಲ್ಲಿ 5 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಂಸ್ಥೆ ಇನ್ನಷ್ಟು ಉತ್ತಮ ಕಾರ್ಯಗಳನ್ನು ಹಮ್ಮಿಕೊಂಡು ಬೆಳವಣಿಗೆ ಕಾಣಲಿದೆ ಎಂದರು.

ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಜಂಟಿ ಕಾರ್ಯದರ್ಶಿ ಕೆ. ಸುಧಾಕರ ಶೆಟ್ಟಿ ಬಾಂಡ್ಯ, ಸದಸ್ಯ ಡಾ| ವೈ. ಎಸ್. ಹೆಗ್ಡೆ, ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ। ಉಮೇಶ್ ಶೆಟ್ಟಿ ಕೆ, ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ, ಎಚ್ ಎಂಎಂ, ವಿಕೆಆರ್ ಶಾಲೆಗಳ ಪ್ರಾಂಶುಪಾಲೆ ಡಾ| ಚಿಂತನಾ ರಾಜೇಶ್, ಉಪಪ್ರಾಂಶುಪಾಲೆ ಶುಭಾ ಉಪಸ್ಥಿತರಿದ್ದರು.
ಡಾ। ಬಿ.ಬಿ.ಹೆಗ್ಡೆ ಕಾಲೇಜಿನ ಉಪಪ್ರಾಂಶುಪಾಲ ಡಾ|ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮ ನಿರೂಪಿಸಿದರು. ಗಾಂಧಿ ಮೈದಾನದಿಂದ ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ಸಭಾಂಗಣವರೆಗೆ ಪುರ ಮೆರವಣಿಗೆ ಸಾಗಿತು. ಎಚ್‌ಎಂಎಂ ಶಾಲೆ, ವಿಕೆಆರ್ ಶಾಲೆ, ಆರ್. ಎನ್ .ಶೆಟ್ಟಿ ಪದವಿ ಪೂರ್ವ ಕಾಲೇಜು, ಡಾ| ಬಿ.ಬಿ. ಹೆಗ್ಡೆ ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಡಿ.18ರಿಂದ ಆರಂಭವಾಗಿ ಡಿ.24ರವರೆಗೆ ನಡೆಯಲಿರುವ ಸಂಭ್ರಮೋತ್ಸವದಲ್ಲಿ ಡಿ.20ರಂದು ಮಂತ್ರಾಲಯ ಶ್ರೀಗಳು, ಡಿ.23ರಂದು ಕರ್ನಾಟಕದ ರಾಜ್ಯಪಾಲರು ಆಗಮಿಸಲಿದ್ದಾರೆ.






