ಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ, ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ, 22 ಜನರ ವಿರುದ್ಧ FIR
Views: 302
ಕನ್ನಡ ಕರಾವಳಿ ಸುದ್ದಿ: ಶಾಲಾ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಾಲೆಯ ಮುಖ್ಯೋಪಾಧ್ಯಾಯನಿಗೆ ಚಪ್ಪಲಿ ಹಾರ ಹಾಕಿ ಸಾರ್ವಜನಿಕವಾಗಿ ಅಪಮಾನಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣವು ಇದೀಗ ಮತ್ತೊಂದು ತಿರುವು ಪಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ 22 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸವಣೂರು ಪಟ್ಟಣದಲ್ಲಿಡಿ. 10 ರಂದು ಈ ಘಟನೆ ನಡೆದಿತ್ತು. ಶಾಲೆಯ ಮುಖ್ಯ ಶಿಕ್ಷಕ ರಾಜೇಸಾಬ ಖುದಾನಸಾಬ ಸಂಕನೂರ ಅವರು ನೀಡಿದ ದೂರಿನ ಆಧಾರದ ಮೇಲೆ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮುಖ್ಯೋಪಾಧ್ಯಾಯ ಜಗದೀಶ್ ವಗ್ಗಣ್ಣನವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದೀಗ, ಮುಖ್ಯೋಪಾಧ್ಯಾಯ ಜಗದೀಶ್ ವಗ್ಗಣ್ಣನವರ ಅವರು ಸಹ ಪ್ರತಿದೂರು ದಾಖಲಿಸಿದ್ದಾರೆ. ಶಾಲೆಗೆ ನುಗ್ಗಿ ತನ್ನನ್ನು ಥಳಿಸಿ, ಚಪ್ಪಲಿಯಿಂದ ಹೊಡೆದು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡುವ ಮೂಲಕ ಅಪಮಾನಗೊಳಿಸಿದ ಮತ್ತು ಜೀವಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಸಾರ್ವಜನಿಕವಾಗಿ ಅಪಮಾನ ಮಾಡಿ, ಜೀವಬೆದರಿಕೆ ಒಡ್ಡಿರುವ ಆರೋಪದಡಿ ಸವಣೂರು ಪೊಲೀಸರು ಒಟ್ಟು 22 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಘಟನೆಯ ವಿಡಿಯೋ ತುಣುಕುಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿದುಬಂದಿದೆ.






