ಜನಮನ

ವಾಯುಭಾರ ಕುಸಿತ: ಮುಂದಿನ 7 ದಿನ ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ

Views: 124

ಕನ್ನಡ ಕರಾವಳಿ ಸುದ್ದಿ: ಮುಂದಿನ 7 ದಿನಗಳ ಕಾಲ ಕರ್ನಾಟಕ ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಗುರುವಾರ ಮಾಹಿತಿ ನೀಡಿದೆ.

ಅರಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಒಂದು ವಾರ ಭಾರೀ ಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮತ್ತು ಬೆಂಗಳೂರಿನ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮನ್ಸೂಚನೆ ನೀಡಿದೆ.

ಅಕ್ಟೋಬರ್ 16 ರಿಂದ 22 ರವರೆಗೆ ಕರ್ನಾಟಕದಾದ್ಯಂತ ಮಳೆ ಮುಂದುವರಿಯಲಿದ್ದು, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಗುಡುಗು ಸಹಿತ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಗಾಳಿಯ ಪ್ರಮಾಣ ಹೆಚ್ಚಿರುವುದರಿಂದ ಸಮುದ್ರ ಪ್ರಕ್ಷುಬ್ದತೆಯಿಂದ ಇರಲಿದೆ. ಹೆಚ್ಚಿನ ಗಾಳಿ ಮಳೆ(ಗಂಟೆಗೆ ಸುಮಾರು 45-55ಕಿ.ಮೀ ಗಾಳಿ ವೇಗ) ಬರುವ ಸಾಧ್ಯತೆಯಿದೆ. ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ಪ್ರವಾಸಿಗರು, ಮೀನುಗಾರರು ನದಿ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸುವುದು, ಈಗಾಗಲೇ ಮೀನುಗಾರಿಕೆಗೆ ಎಂದು ಸಮುದ್ರಕ್ಕೆ ಇಳಿದಿರುವವರು ಸುರಕ್ಷಿತವಾಗಿ ದಡ ಸೇರುವುದು, ತುರ್ತು ಸಂದರ್ಭಗಳಲ್ಲಿ 1077 ಸಹಾಯವಾಣಿ ಅಥವಾ 0820-2574802 ಸಂಪರ್ಕಿಸಲು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.

ವಿವಿಧೆಡೆ ಗುಡುಗು ಸಹಿತ ಮಳೆ

ಕರಾವಳಿಯ ವಿವಿಧೆಡೆ ಗುರುವಾರ ಅಪರಾಹ್ನ ಬಳಿಕ ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿಯೂ ಮಳೆ ಸುರಿದಿದೆ. ಬ್ರಹ್ಮಾವರ, ಕುಂದಾಪುರ, ಬೈಂದೂರು, ಸಂತೆಕಟ್ಟೆ ಮಣಿಪಾಲ ಪರಿಸರದಲ್ಲಿ ಮಧ್ಯಾಹ್ನದ ವೇಳೆ ಹಾಗೂ ರಾತ್ರಿ ಭಾರಿ ಮಳೆಯಾಗಿದೆ.

Related Articles

Back to top button
error: Content is protected !!