ಅಗಲಿದ ಶಿಕ್ಷಕ ಸಂತೋಷ್ ಕುಟುಂಬಕ್ಕೆ 10 ಲಕ್ಷ ರೂ. ಧನ ಸಹಾಯ; ಹೃದಯ ವೈಶಾಲ್ಯತೆ ಮೆರೆದ ಸುಜ್ಞಾನ ಎಜುಕೇಶನಲ್ ಟ್ರಸ್ಟ್

Views: 77
ಕನ್ನಡ ಕರಾವಳಿ ಸುದ್ದಿ: ಇತ್ತೀಚೆಗೆ ವಿಧಿಯ ಕೈವಾಡಕ್ಕೆ ಸಿಲುಕಿ ಇಹಲೋಕವನ್ನು ತ್ಯಜಿಸಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸಂಸ್ಥೆಯ ಶಿಕ್ಷಕರಾದ ಸಂತೋಷ್ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಾಯಿತು ಈ ಹಣವನ್ನು ಮೃತರ ಪತ್ನಿ ಜಯಶ್ರೀ ಅವರ ಹೆಸರಿನಲ್ಲಿ ಠೇವಣಿ ಇಡಲಾಯಿತು.
ಶಿಕ್ಷಕ ಸಂತೋಷ್ ಅವರು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ವಿದ್ಯಾರ್ಥಿಗಳಿಗೆ ಕನ್ನಡದ ಕಂಪನ್ನು ಪಸರಿಸಿ ಭಾಷೆಯನ್ನು ಕಲಿಸಿ ಪ್ರೀತಿಯನ್ನು ಉಣಬಡಿಸಿದ ಶ್ರೇಷ್ಠ ಗುರುವಾಗಿದ್ದರು. ತಮ್ಮ ಪಾಠ-ಪ್ರವಚನಗಳ ಮೂಲಕ ಹಲವು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು. ಅದು ಅಲ್ಲದೇ ಅನೇಕ ಸಂಘ ಸಂಸ್ಥೆಗಳಲ್ಲಿ ಅವಿರತ ಶ್ರಮ ವಹಿಸಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.ಅನೇಕ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲಿದ್ದರು.ತಮ್ಮ ಸರಳ-ಸಜ್ಜನ-ಸುಂದರ ವ್ಯಕ್ತಿತ್ವದ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದವರು ವಿಧಿಯಾಟಕ್ಕೆ ಬಲಿಯಾದರು.
ಸಂತೋಷ್ ಅವರ ಅಗಲಿಕೆಯು ವಿದ್ಯಾಸಂಸ್ಥೆಗೆ ಹಾಗೂ ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.ಅವರದ್ದು ಬೆಲೆ ಕಟ್ಟಲಾಗದ ವ್ಯಕ್ತಿತ್ವ. ಅವರ ಕುಟುಂಬದ ಜೊತೆ ಸಂಸ್ಥೆಯು ಸದಾ ಇರುತ್ತದೆ ಎಂಬ ಭರವಸೆ ನೀಡಿದೆ. ಈ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು,ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಒಗ್ಗೂಡಿ ಈ ದೊಡ್ಡ ಮೊತ್ತವನ್ನು ಸಂಗ್ರಹಿಸಿದ್ದಾರೆ. ಇದು ಶಿಕ್ಷಕರ ಮೇಲಿದ್ದ ಗೌರವ ಮತ್ತು ಮಾನವೀಯತೆಯ ಪ್ರತೀಕವಾಗಿದೆ.
ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ, ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ಉಪಸ್ಥಿತರಿದ್ದರು.ರಜತ್ ಭಟ್ ನಿರೂಪಿಸಿದರು. ಹಾಗೇ ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.