ಇತರೆ

ಪ್ರೀತಿಸಿ ಮದುವೆಯಾದ ಗಂಡನ ಕೊಂದ ಪತ್ನಿಗೆ ಮರಣದಂಡನೆ ಶಿಕ್ಷೆ 

Views: 189

ಕನ್ನಡ ಕರಾವಳಿ ಸುದ್ದಿ : ಪ್ರೀತಿಸಿ‌ ಮದುವೆಯಾದ ಪತಿಯನ್ನು ಕಬ್ಬಿಣದ ರಾಡಿನಿಂದ ಹೊಡೆದು‌ ಕೊಂದು ಇನ್ನಿಬ್ಬರ ಸಹಾಯದಿಂದ ಮೃತದೇಹವನ್ನು ನದಿಗೆ ಎಸೆದ ಪ್ರಕರಣದಲ್ಲಿ ಪತ್ನಿ ಹಾಗು ಆಕೆಗೆ ಸಹಾಯ ಮಾಡಿದ ಓರ್ವನಿಗೆ ಮರಣದಂಡನೆ ಹಾಗೂ ಶವ ಸಾಗಿಸಲು ನೆರವಾದ ಇನ್ನೋರ್ವನಿಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಭದ್ರಾವತಿ ಪಟ್ಟಣದಲ್ಲಿ‌ 2016ರಲ್ಲಿ ನಡೆದ ಘಟನೆಯಲ್ಲಿ ಶಿಕ್ಷೆಗೆ ಒಳಗಾಗಿರುವ ಲಕ್ಷ್ಮಿ ಅವರು ಇಮ್ತಿಯಾಜ್ ಅಹಮದ್ ಎಂಬವರನ್ನು ಗುಲ್ಬರ್ಗಾದಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಲಕ್ಷ್ಮಿಗೆ ಕೃಷ್ಣಮೂರ್ತಿ ಎಂಬವರ ಜೊತೆ‌ ಸಂಬಂಧವಿತ್ತು. ಇದರಿಂದಾಗಿ ಪ್ರಿಯಕರ ಕೃಷ್ಣಮೂರ್ತಿ ಜೊತೆ ಇಮ್ತಿಯಾಜ್ ಅಹಮದ್ರನ್ನು ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದರು. ನಂತರ ಕೃಷ್ಣಮೂರ್ತಿ ತನ್ನ ಸ್ನೇಹಿತ ಶಿವರಾಜ್ ಜೊತೆ ಸೇರಿ ಇಮ್ತಿಯಾಜ್ ಅಹಮದ್ ಶವವನ್ನು ನದಿಗೆ ಎಸೆದಿದ್ದರು. ಈ ಕುರಿತು ಮೃತನ ಸಹೋದರ ಎಜಾಜ್ ಅಹಮದ್ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ನ್ಯೂ ಟೌನ್ನ ಅಂದಿನ ಸಿಪಿಐ ಪ್ರಭು ಬಿ.ಸೂರಿನ್ ಅವರು ಆರೋಪಿಗಳ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ‌ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಗಳ ವಿರುದ್ಧದ ಆರೋಪ‌ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಧೀಶರಾದ ಇಂದಿರಾ ಮೈಲಾಸ್ವಾಮಿ ಚೆಟ್ಟಿಯಾರ್ ಅವರು ಭದ್ರಾವತಿ ಜನ್ನಾಪುರ ನಿವಾಸಿಗಳಾದ ಲಕ್ಷ್ಮಿ (29), ಕೃಷ್ಣಮೂರ್ತಿ (30) ಅವರಿಗೆ ಮರಣದಂಡನೆ ಹಾಗೂ ಶಿವರಾಜ್ (32)ಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

 

Related Articles

Back to top button