ಶಿಕ್ಷಣ

ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ”ಹಿರಿಯ ನಾಗರಿಕರ ದಿನ” ಹಿರಿಯ ಚೇತನಗಳಿಗೆ ಗೌರವಪೂರ್ಣ ನಮನ

"ವಿದ್ಯಾ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರೇರಕರಾದ ಹಿರಿಯರ ಕಾರ್ಯವೈಖರಿ, ಶ್ರಮ, ನಿಷ್ಠೆ, ಸೇವೆಗಳಿಗೆ ಗೌರವ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮ"

Views: 35

ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ “ಹಿರಿಯ ನಾಗರಿಕರ ದಿನ”ವನ್ನು ಭಾವನಾತ್ಮಕವಾಗಿ ಹಾಗೂ ಅರ್ಥಪೂರ್ಣವಾಗಿ ಅಗಸ್ಟ್ 21ರಂದು ಆಚರಿಸಲಾಯಿತು.

ಹಿರಿಯರ ಸೇವೆ ಮತ್ತು ಅನುಭವಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ ಸಂಸ್ಥೆಯಲ್ಲಿ ಅಧ್ಯಾಪನದಲ್ಲಿ ನಿರತರಾಗಿರುವ ಹಿರಿಯ ಶಿಕ್ಷಕರಾದ ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿ, ಶ್ರೀಯುತ ಉದಯ್ ಕುಮಾರ್ ಹೆಗ್ಡೆ, ಬೇಳೂರು ಮತ್ತು ಹಿರಿಯ ಉಪನ್ಯಾಸಕರಾದ ಶ್ರೀಯುತ. ಜಿ. ಕೆ. ರಮೇಶ್ ರಾವ್ ಹಾಗೂ ವಾಹನ ಚಾಲಕರಾಗಿ ದುಡಿಯುತ್ತಿರುವ ಶ್ರೀಯುತ ಶೇಖರ್ ಪೂಜಾರಿ, ರಘುರಾಮ್ ಶೆಟ್ಟಿ, ಶಹಜಾನ್, ಪ್ರಭಾಕರ್ ಶೆಟ್ಟಿ, ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಶ್ರೀಯುತ ಮಂಜ ಈ ಎಲ್ಲ ಹಿರಿಯರಿಗೆ ಸ್ಮರಣಿಕೆಯನ್ನು ನೀಡಿ ಗೌರವ ವಂದನೆ ಸಲ್ಲಿಸಲಾಯಿತು.

ವೇದಿಕೆಯಲ್ಲಿರುವ ಹಿರಿಯರ ಕುರಿತಾಗಿ ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಭಾವನೆಗಳನ್ನು ಭಾವಪೂರ್ಣವಾಗಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಡಳಿತ ನಿರ್ದೇಶಕರಾದ ಕುಮಾರಿ ರೆನಿಟಾ ಲೋಬೊ ಮಾತನಾಡಿ, ಹಿರಿಯರ ಅನುಭವ,ಶ್ರಮ ಹಾಗೂ ಅವರ ನಿಷ್ಠೆ ನಮಗೆಲ್ಲ ಪ್ರೇರಣೆ ಎನ್ನುತ್ತಾ ಅವರು ಸಂಸ್ಥೆಯ ಬೆಳವಣಿಗೆಗೆ ನೀಡಿದ ಸಹಕಾರವನ್ನು ನೆನಪಿಸಿಕೊಂಡರು.

ಇನ್ನೋರ್ವ ಆಡಳಿತ ನಿರ್ದೇಶಕರಾದ ಕುಮಾರಿ ಶಮಿತಾ ರಾವ್ ಇವರು ಮಾತನಾಡಿ, ಹಿರಿಯರು ಕಾರ್ಯ ವೈಖರಿಯನ್ನು ಸ್ಮರಿಸುತ್ತಾ ಕಾರ್ಯಕ್ರಮದಲ್ಲಿ ಹಿರಿಯರಿಗೆ ನೀಡಲಾದ ಸ್ಮರಣಿಕೆಯಲ್ಲಿ ಬರೆದ ಸಂದೇಶವನ್ನು ಭಾವನಾತ್ಮಕವಾಗಿ ಓದಿ ಎಲ್ಲರ ಹೃದಯಾಂತರಾಳವಾಗುವ ಸನ್ನಿವೇಶವನ್ನು ಸೃಷ್ಟಿಸಿದರು.

ಗೌರವ ವಂದನೆ ಸ್ವೀಕರಿಸಿದ ಶಿಕ್ಷಕರು ಮತ್ತು ಚಾಲಕರು ಸಂಸ್ಥೆಯ ಬಗ್ಗೆ ಕೃತಜ್ಞಾಪೂರ್ವಕವಾಗಿ ಮೆಚ್ಚುಗೆಯ ಮಾತುಗಳನ್ನಾಡಿದರು.

ಹಿರಿಯರ ಸೇವೆಯನ್ನು ಸ್ಮರಿಸುತ್ತಾ ಅವರಿಗೆ ಗೌರವ ಸೂಚಿಸುವ ಈ ರೀತಿಯ ಕಾರ್ಯಕ್ರಮಗಳು ಸಮಾಜದಲ್ಲಿ ಮೌಲ್ಯಾಧಾರಿತ ಬದುಕಿನ ಪ್ರೇರಣೆಯಾಗಿ ಪರಿಣಮಿಸುತ್ತವೆ. ಈ ಕಾರ್ಯಕ್ರಮವು ಕೇವಲ ಸಾಂಪ್ರದಾಯಿಕ ಆಚರಣೆ ಅಲ್ಲದೆ ಅತ್ಯಂತ ಭಾವಪೂರ್ಣವಾಗಿ ಮೂಡಿಬಂದು ವಿದ್ಯಾರ್ಥಿಗಳು ಹಿರಿಯರಿಗೆ ಗೌರವ ತೋರಿಸುವ ನೈತಿಕ ಬದ್ಧತೆಯನ್ನು ತಿಳಿಯುವಂತಹ ಸಂದೇಶವನ್ನು ನೀಡಿತು.

Related Articles

Back to top button