ಇತರೆ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ ಪರಾರಿ: ಆರೋಪಿಗಾಗಿ ಹುಡುಕಾಟ

Views: 217

ಕನ್ನಡ ಕರಾವಳಿ ಸುದ್ದಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾದ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಚಂದ್ರಶೇಖರ್ ಅಲಿಯಾಸ್ ಚಂದ್ರು (32) ಪರಾರಿಯಾದ ಕೈದಿ.

ಘಟನೆ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲರ್ ಡಿ.ಗೋಪಿನಾಥ್ ಅವರು ನೀಡಿದ ದೂರಿನ ಮೇರೆಗೆ ವಿ.ವಿ.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2023ರಲ್ಲಿ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದಾಖಲಾಗಿದ್ದ ಡಕಾಯಿತಿ ಪ್ರಕರಣದಲ್ಲಿ ಚಂದ್ರಶೇಖರ್‌ನನ್ನು ಬಂಧಿಸಲಾಗಿತ್ತು. ಎರಡು ವರ್ಷಗಳಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಚಂದ್ರಶೇಖರ್‌ಗೆ ಮೇ 2ರಂದು ಎದೆನೋವು ಹಾಗೂ ವಾಂತಿ ಹೆಚ್ಚಾಗಿದ್ದರಿಂದ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತುರ್ತು ನಿಗಾ ಘಟಕದಿಂದ ಪರಾರಿ: ವೈದ್ಯರ ಸೂಚನೆ ಮೇರೆಗೆ ಚಂದ್ರಶೇಖರ್ಗೆ ತುರ್ತುನಿಗಾ ಘಟಕದ 3ನೇ ಮಹಡಿಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆತನ ಬೆಂಗಾವಲಿಗಾಗಿ ಸಂತೋಷ್ ರಾಥೋಡ್‌ ಎಂಬ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಮೇ 3ರಂದು ರಾತ್ರಿ 11 ಗಂಟೆ ಸುಮಾರಿಗೆ ಎಲ್ಲರ ಕಣ್ತಪ್ಪಿಸಿ ಆರೋಪಿ ತುರ್ತು ನಿಗಾ ಘಟಕದಿಂದ ಪರಾರಿಯಾಗಿದ್ದಾನೆ. ವಿಚಾರ ತಿಳಿದ ಸಂತೋಷ್ ರಾಥೋಡ್, ಮೊದಲಿಗೆ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಆರೋಪಿ ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ, ಜೈಲರ್ ಡಿ.ಗೋಪಿನಾಥ್ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ನಂತರ ವಿ.ವಿ.ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles

Back to top button
error: Content is protected !!