ವಿಷಪೂರಿತ ಇಂಜೆಕ್ಷನ್ ಚುಚ್ಚಿ BJP ನಾಯಕ ಗುಲ್ಫಮ್ ಸಿಂಗ್ ಯಾದವ ಹತ್ಯೆ ಮಾಡಿದ ದುಷ್ಕರ್ಮಿಗಳು ಪರಾರಿ

Views: 86
ಕನ್ನಡ ಕರಾವಳಿ ಸುದ್ದಿ:ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಸೋಮವಾರ ಬಿಜೆಪಿ ನಾಯಕ ಗುಲ್ಫಮ್ ಸಿಂಗ್ ಯಾದವ ಅವರನ್ನು ಮೂವರು ದುಷ್ಕರ್ಮಿಗಳು ವಿಷಕಾರಿ ಇಂಜೆಕ್ಷನ್ ಚುಚ್ಚಿ ಹತ್ಯೆ ಮಾಡಿದ್ದಾರೆ.
60 ವರ್ಷದ ಗುಲ್ಫಮ್ ಸಿಂಗ್ ಜುನವೈ ಪೊಲೀಸ್ ಠಾಣೆ ವ್ಯಾಪ್ತಿಯ ದಫ್ತಾರಾ ಗ್ರಾಮದಲ್ಲಿದ್ದ ತಮ್ಮ ಜಮೀನಿನಲ್ಲಿ ಇದ್ದರು. ಆಗ ಮೋಟಾರ್ ಸೈಕಲ್‌ನಲ್ಲಿ ಬಂದ ಆರೋಪಿಗಳು ಇಂಜೆಕ್ಷನ್ ನೀಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಈ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.
ಬಿಜೆಪಿ ನಾಯಕನನ್ನು ಭೇಟಿಯಾಗಿ ಮೂವರು ಅಪರಿಚಿತರು ಜಮೀನಿಗೆ ಪ್ರವೇಶ ಮಾಡಿದ್ದರು. ಅವರ ಜೊತೆ ಕುಳಿತು, ಅವರ ಯೋಗಕ್ಷೇಮ ವಿಚಾರಿಸಿ, ನೀರು ಕೇಳಿ ಕುಡಿದರು. ನಂತರ ಅಲ್ಲಿಂದ ಹೊರಡುವಾಗ ಯಾದವ್ ಅವರ ಹೊಟ್ಟೆಗೆ ವಿಷಯುಕ್ತ ಇಂಜೆಕ್ಷನ್ ಚುಚ್ಚಿದ್ದಾರೆ. ವಿಷವು ಅವರ ದೇಹದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತಿದ್ದಂತೆ, ಸಿಂಗ್ ಅವರ ಆರೋಗ್ಯ ಹದಗೆಡಲು ಪ್ರಾರಂಭಿಸಿತು, ಅವರು ನೋವಿನಿಂದ ಕಿರುಚಿದರು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಅಲಿಘರ್‌ಗೆ ಕರೆದೊಯ್ಯಲಾಗುತಿತ್ತು ಆದರೆ ಅವರು ದಾರಿಯಲ್ಲಿ ಮೃತಪಟ್ಟಿದ್ದಾರೆ.
ಎಸ್ಪಿ ಕೃಷ್ಣ ಕುಮಾರ್ ಬಿಷ್ಣೋಯ್ ಮತ್ತು ಎಎಸ್ಪಿ ಅನುಕೃತಿ ಶರ್ಮಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ತಂಡಗಳು ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸುತ್ತಿದೆ. ಸ್ಥಳದಲ್ಲಿ ಖಾಲಿ ಇಂಜೆಕ್ಷನ್ ಮತ್ತು ಹೆಲ್ಮೆಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಹಲ್ಲೆಕೋರರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಪೊಲೀಸರು ತಿಳಿಸಿದ್ದಾರೆ.