ಅಭಿಷೇಕ್ ಮಗನಿಗೆ ‘ಅಂಬರೀಷ್’ ಎಂದು ನಾಮಕರಣ?

Views: 122
ಕನ್ನಡ ಕರಾವಳಿ ಸುದ್ದಿ: ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ್ಪ ಕುಟುಂಬದಲ್ಲಿ ಖುಷಿ ಮೂಡಿದೆ. ಅವಿವಾ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿ ಕೇಳಿ ಅಂಬರೀಷ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಒಂದೊಮ್ಮೆ ಅಂಬರೀಷ್ ಇಂದು ಬದುಕಿದ್ದರೆ ನಿಜಕ್ಕೂ ಖುಷಿಪಡುತ್ತಿದ್ದರು. ಈಗ ಗಂಡುಮಗುವಿಗೆ ಅಂಬರೀಷ್ ಎಂದು ನಾಮಕರಣ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ನಾಮಕರಣ ಶಾಸ್ತ್ರದಲ್ಲಿ ಹಲವು ಪದ್ಧತಿಗಳು ಚಾಲ್ತಿಯಲ್ಲಿ ಇವೆ. ಅದರಲ್ಲಿ ತಾತನ ಹೆಸರನ್ನು ಇಡುವುದು ಕೂಡ ಒಂದು. ಆದರೆ, ಇದು ಶಾಸ್ತ್ರೀಯ ವಿಧಾನ ಅಲ್ಲ ಎನ್ನುತ್ತಾರೆ ಬಲ್ಲವರು. ಕೆಲವು ಕಡೆಗಳಲ್ಲಿ ಹುಟ್ಟಿದ 11 ದಿನಕ್ಕೆ ಹೆಸರನ್ನು ಇಡಲಾಗುತ್ತದೆ. ಈ ವೇಳೆ ಹಿರಿಯರ ಹೆಸರು ಹಾಗೂ ಕುಲದೇವರ ಹೆಸರನ್ನು ಮಗುವಿಗೆ ಇಡಲಾಗುತ್ತದೆ. ಇದು ತಾತ್ಕಾಲಿಕ ಮಾತ್ರ.
ನಾಮಕರಣದ ದಿನ 4 ಹೆಸರುಗಳನ್ನು ಮಗುವಿಗೆ ಇಡಲಾಗುತ್ತದೆ. ನಕ್ಷತ್ರದ ಮೇಲೆ ಒಂದು ಹೆಸರು, ಕುಲದೇವರ ಹೆಸರು, ಮಾಸದ ಮೇಲೆ ಒಂದು ಹೆಸರು ಮತ್ತು ವ್ಯಾವಹಾರಿಕ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಅಂತಿಮವಾಗಿ ವ್ಯಾವಹಾರಿಕ ಹೆಸರು ಬಳಕೆಗೆ ಬರುತ್ತದೆ.
ಹಳೆಯ ಕಾಲದಲ್ಲಿ ತಾತನ ಹೆಸರನ್ನೇ ಮಗುವಿಗೆ ಇಡಲಾಗುತ್ತಿತ್ತು ಮತ್ತು ಅದನ್ನೇ ವ್ಯಾವಾಹಾರಿಕವಾಗಿಯೂ ಬಳಕೆ ಮಾಡಲಾಗುತ್ತಿತ್ತು. ಈ ಕಾರಣಕ್ಕೆ ಮನೆಯ ಹಿರಿ ಮಗನಿಗೆ ತಾತನ ಹೆಸರನ್ನು ಇಟ್ಟು ಕರೆಯುತ್ತಿದ್ದರು. ಮಗಳಿಗೆ ಅಜ್ಜಿಯ ಹೆಸರನ್ನು ಇಟ್ಟ ಉದಾಹರಣೆ ಇದೆ.
ಈಗ ಅಂಬರೀಷ್ ಪುತ್ರನಿಗೂ ಸಾಂಪ್ರದಾಯಿಕವಾಗಿ ಅಂಬರೀಷ್ ಎಂದು ಹೆಸರು ಇಡುವ ಸಾಧ್ಯತೆ ಇದೆ. ಇದು ವ್ಯಾವಹಾರಿಕವಾಗಿ ಕರೆಯಲ್ಪಡದೇ ಇದ್ದರೂ ಈ ಹೆಸರನ್ನು ಮಗುವಿಗೆ ಪ್ರೀತಿಯಿಂದ ಕರೆಯಬಹುದು. ಅಂಬರೀಷ್ ಮೇಲೆ ಇಡೀ ಕುಟುಂಬಕ್ಕೆ ಅಪಾರ ಪ್ರೀತಿ ಇದೆ. ಈ ಕಾರಣದಿಂದಲೂ ಅಂಬರೀಷ್ ಎಂದು ನಾಮಕರಣ ಮಾಡುವ ಸಾಧ್ಯತೆ ಇದೆ.






