ಸಾಂಸ್ಕೃತಿಕ

ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ, ತವರೂರು ಬಾರ್ಕೂರಿನ ಶಿಲ್ಪ ಮೊದಲ ತುಳು ಸಿನಿಮಾ ನಿರ್ಮಾಣಕ್ಕೆ ತಯಾರಿ

Views: 190

ಕನ್ನಡ ಕರಾವಳಿ ಸುದ್ದಿ: ಕನ್ನಡ ಚಿತ್ರರಂಗದ ಜನಪ್ರಿಯ ನಟ. ಈಗ ಅವರ ಪತ್ನಿ ಶಿಲ್ಪಾ ಗಣೇಶ್ ತುಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಗಣೇಶ್ ನಟನೆಯ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಶಿಲ್ಪಾ ಗಣೇಶ್ ಈಗ ಮೊದಲ ಬಾರಿಗೆ ತುಳು ಸಿನಿಮಾಣಕ್ಕೆ ಕೈ ಹಾಕಿದ್ದಾರೆ.

ಸ್ವತಃ ಬಾರ್ಕೂರು ಮೂಲದವರಾದ ಶಿಲ್ಪಾ ಗಣೇಶ್ ತವರಿನಲ್ಲಿ ಸಿನಿಮಾ ಮಾಡುವ ಸಾಹಸ ಮಾಡುತ್ತಿದ್ದಾರೆ. ತುಳು ಸಿನಿಮಾಗಳಿಗೆ ಕಳೆದ ಕೆಲ ವರ್ಷಗಳಲ್ಲಿ ಮಾರುಕಟ್ಟೆ ದೊಡ್ಡದಾಗಿದ್ದು, ಅದರ ಲಾಭ ಪಡೆಯುವ ಆಲೋಚನೆ ಶಿಲ್ಪಾ ಗಣೇಶ್ ಅವರದ್ದು.

ಉತ್ತಮ ಬಜೆಟ್ನಲ್ಲಿ ಗುಣಮಟ್ಟದ ಸಿನಿಮಾ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಾಜೆಕ್ಟ್ಗೆ ಕೈ ಹಾಕಿದ್ದು, ಸಿನಿಮಾವನ್ನು ಸಂದೀಪ್ ಬೆದ್ರ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಕತೆ ಹಾಗೂ ಚಿತ್ರಕತೆಯನ್ನು ಮೋಹನ್ ಭಟ್ಕಳ್ ಬರೆದಿದ್ದಾರೆ. ಜನಪ್ರಿಯ ಕ್ಯಾಮೆರಾಮನ್ ಹಾಗೂ ನಿರ್ದೇಶಕ ಸಂತೋಶ್ ರೈ ಪತಾಜೆ ಅವರು ಈ ಸಿನಿಮಾಕ್ಕೆ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಗಟ್ಟಿಯಾದ ತಂತ್ರಜ್ಞರನ್ನೇ ಶಿಲ್ಪಾ ಗಣೇಶ್ ಅವರು ತಮ್ಮ ಮೊದಲ ತುಳು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಸಿನಿಮಾದ ನಾಯಕನಾಗಿ ಕರಾವಳಿ ಭಾಗದ ಬಿಜೆಪಿ ಹಾಗೂ ಬಿಲ್ಲವ ಸಮುದಾಯದ ಮುಖಂಡರೂ ಆಗಿರುವ ಹರಿಕೃಷ್ಣ ಬಂಟ್ವಾಳ ಅವರ ಪುತ್ರ ನಿತ್ಯ ಪ್ರಕಾಶ್ ಬಂಟ್ವಾಳ ನಟಿಸಲಿದ್ದಾರೆ. ನಾಯಕಿಯಾಗಿ ಹೊಸ ಮುಖವನ್ನು ಪರಿಚಯ ಮಾಡುವ ಉಮೇದಿನಲ್ಲಿದ್ದಾರೆ ಶಿಲ್ಪಾ ಗಣೇಶ್. ಸಿನಿಮಾದ ಕತೆ, ಚಿತ್ರಕತೆ, ತಂತ್ರಜ್ಞರು ಅಂತಿಮವಾಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಯಲ್ಲಿವೆ. ಸಿನಿಮಾದ ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭ ಆಗಲಿದ್ದು, ನಟ ಗೋಲ್ಡನ್ ಸ್ಟಾರ್ ಗಣೇಶ್ ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯೂ ಇದೆ.

ಸಿನಿಮಾ ಕೌಟುಂಬಿಕ ಕತೆಯನ್ನು ಒಳಗೊಂಡಿದ್ದು, ಹಾಸ್ಯ ಪ್ರಧಾನ ಆಗಿರಲಿದೆ. ಮಂಗಳೂರು, ಉಡುಪಿ, ಮೂಡುಬಿದಿರೆ, ಬಂಟ್ವಾಳ ಸೇರಿದಂತೆ ಕರಾವಳಿ ಭಾಗದಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಚಿತ್ರದ ಹಾಡುಗಳನ್ನು ಕೆಲವು ಬೇರೆ ಲೊಕೇಶನ್ಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಇದೆ ಎಂದು ನಿರ್ದೇಶಕ ಸಂದೀಪ್ ಹೇಳಿದ್ದಾರೆ.

ಶಿಲ್ಪಾ ಗಣೇಶ್ ಮೂಲತಃ ಕರಾವಳಿಯವರು. ಉಡುಪಿ ಬಳಿಯ ಬಾರ್ಕೂರು ಅವರ ಹುಟ್ಟೂರು. ಹಾಗಾಗಿ ತಮ್ಮ ತವರು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಶಿಲ್ಪಾ ಅವರಿಗೆ ಇತ್ತಂತೆ ಹಾಗಾಗಿ ಈಗ ತುಳು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

Related Articles

Back to top button
error: Content is protected !!