ಸಾಂಸ್ಕೃತಿಕ ಸಂವಹನವಾಗಿ ಭಾಷೆ: ಡಾ. ರಾಜೇಂದ್ರ ಎಸ್.ನಾಯಕ

Views: 75
ಕುಂದಾಪುರ:ಮಾನವ ಯಾವುದೇ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪಡೆದರೂ ತನ್ನ ಬದುಕಿನ ಜೊತೆಗೆ ಹೊಂದಿಕೊಂಡಿರುವ ಆಚಾರ, ವಿಚಾರ, ನಂಬಿಕೆ ಮತ್ತು ಚರಿತ್ರೆಯನ್ನು ತನ್ನ ಮಾತೃ ಭಾಷೆಯಲ್ಲಿ ಅಭಿವ್ಯಕ್ತಿಸುತ್ತಾನೆ. ಅದನ್ನು ತನ್ನ ಮುಂದಿನ ಪೀಳಿಗೆಗೆ ದಾಟಿಸುವ ಕೈಂಕರ್ಯವನ್ನು ಮಾಡುತ್ತಾನೆ. ಹೀಗೆ ಸಾಂಸ್ಕೃತಿಕ ಸಂವಹನವಾಗಿರುವ ಭಾಷೆ ನಮ್ಮ ಬದುಕಿನ ಭಾಗವಾಗಿದ್ದು ದೈನಂದಿನ ಬದುಕು ಮತ್ತು ಸಾರ್ವಜನಿಕ ಜೀವನದಲ್ಲಿ ಮಾತೃ ಭಾಷೆಯನ್ನು ಬಳಸಿದಲ್ಲಿ ಕನ್ನಡದ ಉಳಿವು ಮತ್ತು ಬೆಳವಣಿಗೆ ಸಾಧ್ಯವೆಂದು ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್.ನಾಯಕ ಹೇಳಿದರು.
ಅವರು ಕಾಲೇಜು ಕನ್ನಡ ಸಂಘ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದಲ್ಲಿ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ ಇಲ್ಲಿ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿಯಲ್ಲಿ ಶಂಕರ ಮಹಾಂತ, ಚಂದ್ರು ಮಹಾಂತ ಮತ್ತು ಧರ್ಮ ಮಹಾಂತ ಇವರಿಂದ ಕನ್ನಡ ನಾಡು ನುಡಿ ಕುರಿತಾದ ಗೀತ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾವ್ಯ ಮತ್ತು ತಂಡದವರ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಮರಾಯ ಆಚಾರ್ಯ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ನಾಗರಾಜ ಯು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಸಂಘದ ಅಧ್ಯಕ್ಷರಾದ ನಾಗರಾಜ ವೈದ್ಯ ಎಂ. ಸ್ವಾಗತಿಸಿ, ಡಾ. ವೆಂಕಟರಾಮ ಭಟ್ ವಂದಿಸಿದರು.