ಸಾಂಸ್ಕೃತಿಕ

ಕುಂದಾಪುರದ ಕೆರಾಡಿಯಲ್ಲಿ ಕಾಂತಾರ ಶೂಟಿಂಗ್‌ ಸಡಗರ:ಕಥೆ ಏನಿರಬಹುದು..? ಎಲ್ಲೂ ಬಾಯಿಬಿಡದ ಚಿತ್ರ ತಂಡ!

Views: 164

ಕುಂದಾಪುರದ ಕೆರಾಡಿಯಲ್ಲಿ ಭಾರೀ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣ ನಡೆಸಲಾಗುತ್ತಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಎರಡನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.ಕಾಂತಾರ ಚಾಪ್ಟರ್‌ 1 ಕಥೆ ಏನಿರಬಹುದು ಎಂದು ಎಲ್ಲೂ ಚಿತ್ರತಂಡ ಬಾಯಿಬಿಟ್ಟಿಲ್ಲ.

ಕಾಂತಾರ-1 ಗಾಗಿ ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಇದೀಗ ಬಹುನಿರೀಕ್ಷಿತ ಕಾಂತಾರ-1 ಸಿನೆಮಾದ ಪೋಸ್ಟರ್‌ವೊಂದು ರರಿವೀಲ್‌ ಆಗಿದ್ದು ಭಾರೀ ಸುದ್ದಿ ಮಾಡುತ್ತಿದೆ.

ಪಾತ್ರಕ್ಕಾಗಿ ಕಳರಿ ಪಯಟ್ಟು ಸಮರಕಲೆಯನ್ನು ಕಲಿಯುತ್ತಿದ್ದಾರೆ. ಕೆಲ ದಿನಗಳ ಹಿಂದೆಯೇ ಈ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಅಧಿಕೃತವಾಗಿ ಯಾರು ಇದನ್ನು ಸ್ಪಷ್ಟಪಡಿಸಿರಲಿಲ್ಲ. ಇದೀಗ ಫೋಟೊ ಸಮೇತ ಆ ವಿಚಾರ ಬಹಿರಂಗವಾಗಿದೆ. ಕತ್ತಿ, ಗುರಾಣಿ ಹಿಡಿದು ರಿಷಬ್ ಶೆಟ್ಟಿ ಕಳರಿ ಪಯಟ್ಟು ಕಲಿಯುತ್ತಿರುವ ಫೋಟೊ ರಿವೀಲ್ ಆಗಿದೆ.

ಇನ್ನು ಕರಾವಳಿಯ ‘ಕಾಂತಾರ’-1 ಕಥೆಗೆ ಕೇರಳದ ಪುರಾತನ ಸಮರ ಕಲೆಗೂ ಏನು ಸಂಬಂಧ ಎನ್ನುವುದು ಸಿನಿಮಾ ತೆರೆಗೆ ಬಂದಮೇಲೆ ಗೊತ್ತಾಗಲಿದೆ.

ಕುಂದಾಪುರದಲ್ಲಿ ಬೃಹತ್‌ ಶೂಟಿಂಗ್‌ ಸೆಟ್‌ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಬೆಂಗಳೂರು, ಮುಂಬೈ, ಹೈದರಾಬಾದ್‌ನಿಂದ ಸುಮಾರು 600 ಕಾರ್ಪೆಂಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 22 ಸಾವಿರ ಚದರ ಅಡಿ ವಿಸ್ತೀರ್ಣದ ಶೂಟಿಂಗ್ ಫ್ಲೋರ್ ನಿರ್ಮಿಸಿ ‘ಕಾಂತಾರ’ ಚಾಪ್ಟರ್-1 ಚಿತ್ರೀಕರಣ ನಡೆಸಲಾಗುತ್ತಿದೆ. ಅದರ ಒಳಗೆ ನಾಲ್ಕೈದು ಸೆಟ್‌ಗಳನ್ನು ನಿರ್ಮಿಸಲಾಗಿದೆ. ಮಳೆ ಬರುವಾಗಲು ಚಿತ್ರೀಕರಣ ನಿಲ್ಲಿಸದೇ ಚಿತ್ರೀಕರಣ ನಡೆಸುತ್ತಿದ್ದಾರೆ.ಈಗಾಗಲೇ ಕಾಂತಾರ ಚಾಪ್ಟರ್‌ 1ರಲ್ಲಿ ನಟಿಸಲು ಆಯ್ಕೆಯಾದ ಕಲಾವಿದರಿಗೆ ತೀವ್ರವಾದ ತರಬೇತಿ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಕಾಂತಾರ ಸಿನಿಮಾಕ್ಕೆ ಕೆಲವು ದಿನಗಳ ಹಿಂದೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಈ ಕಲಾವಿದರಿಗೆ ಕಠಿಣ ತರಬೇತಿ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಕಾಂತಾರ ಸಿನಿಮಾಕ್ಕೆ ಕೆಲಸ ಮಾಡಿದವರೇ ಚಾಪ್ಟರ್‌ 1ಕ್ಕೆ ಕೆಲಸ ಮಾಡಲಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಇರಲಿದೆ. ಕ್ಯಾಮೆರಾಮೆನ್‌ ಆಗಿ ಅರವಿಂದ್‌ ಕಶ್ಯಪ್‌ ಕೆಲಸ ಮಾಡಲಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಹೀರೋಯಿನ್‌, ವಿಲನ್‌ ಸೇರಿದಂತೆ ಇತರೆ ಪಾತ್ರದಾರಿಗಳ ವಿವರ ದೊರಕಿಲ್ಲ.

ಪಂಜುರ್ಲಿ, ಗುಳಿಗ ದೈವದ ಮೂಲ ಕಥೆಯನ್ನು ಕಾಂತಾರ ಚಾಪ್ಟರ್‌ 1 ಸಿನಿಮಾ ಹೊಂದಿರಲಿದೆ. ಹೀಗಾಗಿ ಈ ಚಿತ್ರದಲ್ಲಿ ಪುರಾತನ ವಿಷಯಗಳು ಇರಲಿವೆ ಎಂದು ಚಿತ್ರತಂಡದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಉಳಿದಂತೆ ಕಾಂತಾರದ ಯಾವುದೇ ಅಪ್‌ಡೇಟ್‌ ಚಿತ್ರತಂಡದ ಕಡೆಯಿಂದ ಬಂದಿಲ್ಲ. ಚಿತ್ರದ ಸ್ಟೋರಿ, ಪಾತ್ರಗಳ ಕುರಿತು ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸುತ್ತಿದೆ ಚಿತ್ರತಂಡ.

ಕಾಂತಾರ ಸಿನಿಮಾಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲವೂ ಎಲ್ಲರಲ್ಲಿದೆ. ಸಾಯಿ ಪಲ್ಲವಿ, ಆಲಿಯಾ ಭಟ್‌, ಸಪ್ತಮಿ ಗೌಡ, ರುಕ್ಮಿಣಿ ವಸಂತ್‌ರಲ್ಲಿ ಯಾರಾದರೂ ಒಬ್ಬರನ್ನು ಕಾಂತಾರಕ್ಕೆ ಹೀರೋಯಿನ್‌ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆಯಂತೆ. ಇವರಲ್ಲಿ ರುಕ್ಮಿಣಿ ವಸಂತ್‌ ಈ ಸಿನಿಮಾಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರುಕ್ಮಿಣಿ ವಸಂತ್‌ ಅವರು ಕಾಂತಾರ ಸಿನಿಮಾಕ್ಕಾಗಿ ಲುಕ್‌ ಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದರು.

ತ್ರಿಶೂಲಧಾರಿ ಸನ್ಯಾಸಿಯೊಬ್ಬರು ರಕ್ತಸಿಕ್ತವಾಗಿರುವಂತೆ ರಿಷಬ್‌ ಶೆಟ್ಟಿ ಘೋರವಾಗಿ ಈ ಫಸ್ಟ್‌ಲುಕ್‌ನಲ್ಲಿ ಕಾಣಿಸಿದ್ದಾರೆ. ಇದು ಪರಶುರಾಮನ ಸೃಷ್ಟಿಯ ತುಳುನಾಡಿನ ಸುಳಿವು ಆಗಿರಬಹುದು ಎನ್ನಲಾಗುತ್ತಿದೆ. ಗುಳಿಗ ದೈವದ ಮೂಲದ ಕಥೆಯೂ ಆಗಿರಬಹುದು.ಮುಂದಿನ ದಿನಗಳಲ್ಲಿ ಕುಂದಾಪುರದಲ್ಲಿ ಕಾಂತಾರ ಶೂಟಿಂಗ್‌ ಸಡಗರ ಹೆಚ್ಚಲಿದೆ.

 

Related Articles

Back to top button
error: Content is protected !!