ಬ್ಯಾಂಕಿನಲ್ಲಿ ನೀವು ಇಟ್ಟಿರುವ ಹಣಕ್ಕೆ ವಿಮೆ ಇದೆಯೆ?

Views: 0
ಬ್ಯಾಂಕಿನಲ್ಲಿ ನೀವು ಇಟ್ಟಿರುವ ಹಣಕ್ಕೆ ವಿಮೆ ಇದೆಯೆ? ನೀವು ಇಟ್ಟಿರುವ ಹಣ ನಿಮಗೆ ಹಿಂದೆ ಸಿಗುವ ಖಾತ್ರಿ ಇದೆಯೆ?

ಹೌದು. ಬ್ಯಾಂಕಿನಲ್ಲಿ ನೀವು ಇಟ್ಟಿರುವ ಐದು ಲಕ್ಷ ರೂಪಾಯಿಗಳ ವರೆಗೆ ವಿಮೆಯ ರಕ್ಷಣೆ ಇದೆ. ನೀವು ಹಣ ಇಟ್ಟಿರುವ ಬ್ಯಾಂಕ್ ಮುಳುಗಿದರೂ ಐದು ಲಕ್ಷ ರೂಪಾಯಿಗಳ ವರೆಗೆ ನಿಮ್ಮ ಹಣ ನಿಮಗೆ ಸಿಗುವುದು ಖಾತ್ರಿ.“ಡಿಪಾಸಿಟ್ ಇನ್ಶೂರೆನ್ಸ್ ಎಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್” (DICGC) ಭಾರತ ಸರ್ಕಾರದ ಹಣಕಾಸು ಇಲಾಖೆಯ ಅಧೀನದಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕಿನ ಒಂದು ಅಂಗಸಂಸ್ಥೆ. ಈ ನಿಗಮ(Corporation)ವನ್ನು 15.07.1978 ರಂದು ಸ್ಥಾಪನೆ ಮಾಡಲಾಯಿತು. ಜನಸಾಮಾನ್ಯರು ಬ್ಯಾಂಕುಗಳಲ್ಲಿ ಇಟ್ಟಿರುವ ಹಣಕ್ಕೆ ವಿಮೆಯ ರಕ್ಷಣೆ ನೀಡುವುದು ಈ ನಿಗಮದ ಉದ್ಧೇಶಗಳಲ್ಲಿ ಒಂದು. ಗ್ರಾಹಕರು ಬ್ಯಾಂಕಿನಲ್ಲಿ ತೆರೆದಿರುವ ಉಳಿತಾಯ ಖಾತೆ, ಚಾಲ್ತಿ ಖಾತೆ, ನಿರಖು ಠೇವಣಿ ಮತ್ತು ಆವರ್ತ ಠೇವಣಿಗಳಿಗೆ ಒಟ್ಟು ರೂ.5,00,000 ವರೆಗೆ (ಗರಿಷ್ಠ ಮಿತಿ) ವಿಮೆಯ ಸೌಲಭ್ಯ ಇರುತ್ತದೆ. ಠೇವಣಿ ಮತ್ತು ಅದರ ಮೇಲಿನ ಬಡ್ಡಿ ಸೇರಿ ಒಟ್ಟು ಐದು ಲಕ್ಷ ರೂಪಾಯಿಗಳ ವರೆಗೆ ವಿಮೆ ಇರುತ್ತದೆ. ಮೊದಲು ಒಂದು ಲಕ್ಷ ರೂಪಾಯಿ ಇದ್ದ ವಿಮೆಯ ಗರಿಷ್ಠ ಮಿತಿಯನ್ನು 04.02.2020 ರಿಂದ ಐದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಒಬ್ಬ ಗ್ರಾಹಕನು ಬೇರೆ ಬೇರೆ ಬ್ಯಾಂಕುಗಳಲ್ಲಿ ಖಾತೆ ಇರಿಸಿದ್ದರೆ ವಿಮೆಯ ಮಿತಿ ಪ್ರತಿ ಬ್ಯಾಂಕಿಗೂ ರೂ.5,00,000 ಆಗಿರುತ್ತದೆ. ಒಂದೇ ಬ್ಯಾಂಕಿನ ಬೇರೆ ಬೇರೆ ಶಾಖೆಗಳಲ್ಲಿ ಖಾತೆಗಳಿದ್ದರೆ ಎಲ್ಲಾ ಶಾಖೆಗಳಲ್ಲಿ ಇರುವ ಹಣ ಒಟ್ಟು ಸೇರಿಸಿ ಆ ಬ್ಯಾಂಕಿನ ವಿಮೆಯ ಮಿತಿ ಐದು ಲಕ್ಷ ರೂಪಾಯಿ ಆಗಿರುತ್ತದೆ. ಠೇವಣಿ ಇನ್ಶೂರೆನ್ಸ್ ಪ್ರೀಮಿಯಂ ಹಣವನ್ನು ಆಯಾ ಬ್ಯಾಂಕುಗಳೇ ಭರಿಸುತ್ತವೆ. ಬ್ಯಾಂಕ್ ಗ್ರಾಹಕರು ವಿಮೆಯ ಪ್ರೀಮಿಯಂ ಹಣವನ್ನು ಕಟ್ಟಬೇಕಾಗಿಲ್ಲ.
ನಾರಾಯಣ ಶೆಟ್ಟಿಗಾರ್, ಬೆಂಗಳೂರು
ನಿವೃತ್ತ AGM ಕೆನರಾ ಬ್ಯಾಂಕ್
. ಸಂಪಕ೯ : 9845660131






