ಬೀಜಾಡಿ ಸರ್ಕಾರಿ ಪ್ರೌಢ ಶಾಲೆ :ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪೂರಕ ಸೌಲಭ್ಯಗಳು ಆಗಬೇಕಾಗಿದೆ -ಶಂಕರ ಐತಾಳ್

Views: 302
ಕೋಟೇಶ್ವರ: ಸರಕಾರಿ ಶಾಲೆ ಉಳಿಯಬೇಕಾದರೆ ಸಮುದಾಯದ ಪಾತ್ರ ಅತಿ ಮಹತ್ವದ್ದು ಸಮುದಾಯದಿಂದ ಸರಕಾರಿ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಮತ್ತು ಅವುಗಳನ್ನು ಉಚಿತ ರೀತಿಯಲ್ಲಿ ಬಳಸಿಕೊಳ್ಳುವುದು ಸರಕಾರಿ ಶಾಲೆಯ ಬೆಳವಣಿಗೆಗೆ ಪೂರಕ. ವರ್ಷದಿಂದ ವರ್ಷಕ್ಕೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಪೂರಕ ಸೌಲಭ್ಯಗಳು ಆಗಬೇಕಾಗಿದೆ. ಎಂದು ಗೀತಾ ಎಚ್ ಎಸ್ ಎನ್ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಶಂಕರ ಐತಾಳ್ ಅವರು ಅಭಿಪ್ರಾಯಪಟ್ಟರು.
ಅವರು ಕೋಟೇಶ್ವರ ಸಮೀಪದ ಬೀಜಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಗೀತಾ ಎಚ್ ಎಸ್ ಎನ್ ಫೌಂಡೇಶನ್ ನ ಮೂಲಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್ಸ್ ಸೂಟ್ ಹಾಗೂ ಟೀ ಶರ್ಟ್ ಗಳನ್ನು ವಿತರಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ನೀಡಲಾಗುವ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಕಾಶ್ ಪೂಜಾರಿಯವರು ವಿತರಿಸಿ, ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಕ್ರಮ ಪ್ರಕಾರ ಬಳಸಿಕೊಂಡು ತಮ್ಮ ಜೀವನ ಮಟ್ಟ ಹಾಗೂ ಶಿಕ್ಷಣವನ್ನು ಉತ್ತಮಗೊಳಿಸಿಕೊಳ್ಳಬೇಕು. ಶಾಲೆಗೆ ಅತಿ ತುರ್ತಾಗಿ ಸಭಾಂಗಣದ ಅಗತ್ಯವಿದ್ದು ಅದನ್ನು ನಿರ್ಮಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಂತರ ಮಾತನಾಡಿದ ಊರಿನ ಹಿರಿಯರು, ಗಣ್ಯರು ಈ ಶಾಲೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೀ ಶೇಷಗಿರಿ ಗೋಟ ಅವರು ಶಾಲೆಯ ಅಭಿವೃದ್ಧಿಗಾಗಿ ಹಿತ ರಕ್ಷಣಾ ಸಮಿತಿಯನ್ನು ರಚಿಸಲಾಗಿದ್ದು ಆ ಸಮಿತಿಯ ಮೂಲಕ ಹಾಗೂ ಬಲಿಷ್ಠವಾದ ಹಳೆ ವಿದ್ಯಾರ್ಥಿ ಸಂಘ ರಚನೆ ಮಾಡುವುದರ ಮೂಲಕ ಶಾಲೆಗೆ ಅಗತ್ಯವಾದ ಸೌಲಭ್ಯಗಳನ್ನು ದಾನಿಗಳ ಮೂಲಕ ಪಡೆದು ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬೇಕೆಂದು ಹೇಳಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಶೇಖರ ಚಾತ್ರಭೆಟ್ಟು, ಖಜಾಂಚಿ ಬಾಬಣ್ಣ ಪೂಜಾರಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಲಕ್ಷ್ಮಣ ನಾಯ್ಕ್ , ಗೀತಾ ಎಚ್ ಎಸ್ ಎನ್ ಫೌಂಡೇಶನ್ ನ ಗೌರವ ಸಲಹೆಗಾರರಾದ ಪ್ರಭಾಕರ ಐತಾಳ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಣೇಶ್ ಶಾಲೆಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಶಿಕ್ಷಕರಾದ ವಿನೋದ ಎಂ ಅವರು ಅತಿಥಿಗಳನ್ನು ಗಣ್ಯರನ್ನು ಹಾಗೂ ಪೋಷಕರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನು ಆಡಿದರು ಶಿಕ್ಷಕರಾದ ನಟರಾಜ್ ಅವರು ಧನ್ಯವಾದ ಅರ್ಪಿಸಿದರು ಶಿಕ್ಷಕರಾದ ಡಾ ಸದಾನಂದ ಬೈಂದೂರು ಈ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ನಿರೂಪಿಸಿದರು.