ಆರೋಗ್ಯ

ಜೀವನ ಶೈಲಿ ಮತ್ತು ಸಕಾಲಿಕ ಚಿಕಿತ್ಸೆಯಿಂದ ವೃದ್ಧಾಪ್ಯ ಸುಖಮಯ

Views: 138

ಮರವಂತೆ :ದೀರ್ಘಕಾಲ ಆರೋಗ್ಯವಂತರಾಗಿರಬೇಕೆಂದರೆ ನಮ್ಮ ಬದುಕಿಗೆ ವರ್ಷಗಳನ್ನು ಸೇರಿಸುತ್ತ ಹೋಗುವ ಬದಲು ನಾವು ಬದುಕುವ ವರ್ಷಗಳಿಗೆ ಜೀವ ತುಂಬುತ್ತ ಹೋಗಬೇಕು. ಅದರೊಂದಿಗೆ ನಮ್ಮ ಹದಿಹರೆಯ ಮತ್ತು ಯೌವನವನ್ನು ವಿಸ್ತರಿಸಿಕೊಳ್ಳುತ್ತ ಸಾಗಿ ಮುದಿತನಕ್ಕೆ ವಶವಾಗುವುದನ್ನು ಮುಂದೂಡಬಹುದು ಎಂದು ಉಡುಪಿಯ ಆದರ್ಶ ಆಸ್ಪತ್ರೆಯ ತಜ್ಞವೈದ್ಯ ಡಾ. ಕೆ. ಸುದೀಪ್ ಶೆಟ್ಟಿ ಹೇಳಿದರು.

ಮರವಂತೆಯ ಸೇವಾ, ಸಾಂಸ್ಕೃತಿಕ ವೇದಿಕೆ ಸಾಧನಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಇಲ್ಲಿನ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ನಡೆದ ವಯೋವೃದ್ಧರನ್ನು ಕಾಡುವ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು ಕುರಿತು ನಡೆದ ಮಾರ್ಗದರ್ಶನ ಶಿಬಿರದಲ್ಲಿ ಅವರು ಮಾಹಿತಿ, ಮಾರ್ಗದರ್ಶನ ನೀಡಿದರು.

ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಜನರನ್ನು ಬಾಧಿಸುವ ಹಲವು ಮನೋದೈಹಿಕ ಸಮಸ್ಯೆಗಳನ್ನು ದೃಕ್ ಮಾಧ್ಯಮ ಬಳಸಿ ವಿವರಿಸಿದ ಅವರು, ಅವುಗಳು ಸನಿಹಕ್ಕೆ ಸುಳಿಯದಂತೆ ನೋಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳನ್ನು ವಿಸ್ತೃತವಾಗಿ ತಿಳಿಸಿಕೊಟ್ಟರು. ವೃದ್ಧಾಪ್ಯದಲ್ಲಿಯೂ ಚಟುವಟಿಕೆಯಿಂದ ಇರಬೇಕಾದ ಅಗತ್ಯವನ್ನು, ರೂಢಿಸಿಕೊಳ್ಳಬೇಕಾದ ಆರೋಗ್ಯಕರ ಜೀವನಶೈಲಿಯನ್ನು ಮನದಟ್ಟು ಮಾಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕೆ. ಗಣೇಶ ಭಟ್ಟ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿ ಜನರಲ್ಲಿ ಇಂತಹ ಅರಿವು ಮೂಡಿಸುವ ಕೆಲಸ ಇನ್ನಷ್ಟು ನಡೆಯಬೇಕು ಎಂದರು.

ಸಾಧನಾ ಸದಸ್ಯ ಸೋಮಯ್ಯ ಬಿಲ್ಲವ ಸ್ವಾಗತಿಸಿದರು. ಅಧ್ಯಕ್ಷ ಪುಟ್ಟ ಎಂ. ಬಿಲ್ಲವ, ಕಾರ್ಯದರ್ಶಿ ಶೇಷಗಿರಿ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಗಜೇಂದ್ರ ಖಾರ್ವಿ ವಂದಿಸಿದರು. ದೇವಿದಾಸ ಶ್ಯಾನುಭಾಗ್ ನಿರೂಪಿಸಿದರು. ಆರೋಗ್ಯ ಕೇಂದ್ರದ ಸಿಬ್ಬಂದಿ ಪೂರ್ಣಿಮಾ, ಹರೀಶಗೌಡ, ಶ್ಯಾಮಲಾ ಶಿಬಿರಾರ್ಥಿಗಳ ಬಿಪಿ ಮತ್ತು ಶುಗರ್ ಪರೀಕ್ಷೆ ನಡೆಸಿದರು.

Related Articles

Back to top button