ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನಿಧನ

Views: 115
ಮಂಗಳೂರು: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ(79) ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ವಸಂತ ಬಂಗೇರ ಇಂದು ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬೆಳ್ತಂಗಡಿಯಲ್ಲಿ ಐದು ಬಾರಿಯ ಶಾಸಕರಾಗಿದ್ದ ಕೆ.ವಸಂತ ಬಂಗೇರ ದೀರ್ಘ ಕಾಲದ ಆನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಬಂಗೇರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಬೆಂಗಳೂರಿನ ಆಸ್ಪತ್ರೆಯಲ್ಲಿ ಕಳೆದ ಹಲವು ತಿಂಗಳಿನಿಂದ ನಿರಂತರ ಚಿಕಿತ್ಸೆ ನಡೆಯುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಗುರುವಾರ ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸಲಿದ್ದು ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಚುನಾವಣೆಗೆ ನಿಂತು ಗೆಲವು ಸಾಧಿಸಿ ಬಂಗೇರ ದಾಖಲೆ ಬರೆದಿದ್ದರು. 1983 ಮತ್ತು 1985ರಲ್ಲಿ ವಸಂತ ಬಂಗೇರ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾದರೆ ಆ ನಂತರ 1989ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತ ಬಂಗೇರ ಸೋಲು ಕಂಡಿದ್ದರು.
1994ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿದರು. 1999 ಮತ್ತು 2004ರಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಜೆಡಿಎಸ್ನಿಂದ ಸ್ಪರ್ಧಿಸಿದ್ದ ಇವರನ್ನು ಸಹೋದರ ಪ್ರಭಾಕರ ಬಂಗೇರ ಸೋಲಿಸಿದ್ದರು. ಆ ನಂತರ 2008ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ವಸಂತ ಬಂಗೇರ ಸಹೋದರನನ್ನು ಸೋಲಿಸಿದರು. 2013ರಲ್ಲಿ ವಸಂತ ಬಂಗೇರ ಕಾಂಗ್ರೆಸ್ನಿಂದ ಸ್ಪರ್ಧಿಸಿ ಬಿಜೆಪಿಯ ರಂಜನ್ ಗೌಡ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.






