ರಾಜಕೀಯ

ಅಶ್ಲೀಲ ವೀಡಿಯೋ ವೈರಲ್, ರಾಜಕೀಯ ಸದ್ದು.. ಸಂಸದ ಪ್ರಜ್ವಲ್ ಅಮಾನತು, ರೇವಣ್ಣ ಅವರಿಗೆ ಶೋಕಾಸ್ ನೋಟಿಸ್..!

Views: 83

ಬೆಂಗಳೂರು,:ಅಶ್ಲೀಲ ವೀಡಿಯೋಗೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಅಮಾನತು ಮಾಡಿ ಮಾಜಿ ಸಚಿವ ರೇವಣ್ಣ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ಜೆಡಿಎಸ್ ಕೋರ್‌ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಹುಬ್ಬಳ್ಳಿಯಲ್ಲಿ ಇಂದು ಜೆಡಿಎಸ್ ಕೋರ್‌ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಕೋರ್‌ಕಮಿಟಿ ಸಭೆಯಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆಯೇ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೂ ಶೋಕಾಸ್‌ ನೋಟಿಸ್ ಜಾರಿ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಕೋರ್ ಕಮಿಟಿಯಲ್ಲಿ ಈ ನಿರ್ಧಾರವಾದ ಬೆನ್ನಲ್ಲೆ ಪ್ರಜ್ವಲ್‌ರೇವಣ್ಣ ಅವರನ್ನು ಅಮಾನತು ಮಾಡಿ ಜೆಡಿಎಸ್ ಅಧಿಕೃತ ಆದೇಶವನ್ನು ಹೊರಡಿಸಿದೆ.

ಕೋರ್ ಕಮಿಟಿ ಸಭೆಯ ನಂತರ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಕೋರ್‌ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಅವರು ಸಭೆಯ ನಿರ್ಧಾರಗಳ ಬಗ್ಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ ಪ್ರಜ್ವಲ್‌ರೇವಣ್ಣ ಅಮಾನತು ಮಾಡುವಂತೆ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ಅವರಿಗೆ ಶಿಫಾರಸ್ಸು ಮಾಡುವ ತೀರ್ಮಾನ ಕೈಗೊಂಡಿದ್ದೇವೆ ಎಂದರು.

ಹಾಗೆಯೇ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು.

ಈ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ಕೊಡಲಾಗುವುದು, ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ತನಿಖೆಯಲ್ಲಿ ಪ್ರಜ್ವಲ್‌ರೇವಣ್ಣ ತಪ್ಪಿತಸ್ಥರೆಂದು ಸಾಬೀತಾದರೆ ಅವರನ್ನು ಪಕ್ಷದಿಂದ ಉಚ್ಛಾಟಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ನಮ್ಮ ಕುಟುಂಬದ ವರ್ಚಸ್ಸು ಹಾಳು ಮಾಡಲು ಈ ಯತ್ನ ನಡೆದಿದೆ ಎಂದು ದೂರಿದ ಅವರು, ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸೋಲು ತರುವ ಉದ್ದೇಶದಿಂದ ಈ ಕುತಂತ್ರವನ್ನು ನಡೆಸಲಾಗಿದೆ. ತನಿಖೆಯಲ್ಲಿ ಸತ್ಯ ಬಯಲಾಗಲಿದೆ ಎಂದರು.

ಸಂಸದ ಪ್ರಜ್ವಲ್‌ರೇವಣ್ಣ ಅವರ ಅಶ್ಲೀಲ ವೀಡಿಯೋ ವೈರಲ್ ರಾಜಕೀಯವಾಗಿ ದೊಡ್ಡ ಸದ್ದು ಮಾಡಿತ್ತು. ಹಾಗೆಯೇ,

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೇನರಸೀಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥೆ ನೀಡಿರುವ ದೂರನ್ನು ಆಧರಿಸಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮತ್ತು ಪ್ರಜ್ವಲ್‌ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದು ಜೆಡಿಎಸ್ ಪಕ್ಷಕ್ಕೆ ಮುಜುಗರ ತಂದಿತ್ತು, ಇವರಿಬ್ಬರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಜೆಡಿಎಸ್‌ನ ಕೆಲ ಶಾಸಕರು ಹಾಗೂ ಮುಖಂಡರು ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಕೋರ್‌ಕಮಿಟಿ ಸಭೆ ಇಂದು ಹುಬ್ಬಳ್ಳಿಯಲ್ಲಿ ಸಭೆ ಸೇರಿ ಪ್ರಜ್ವಲ್‌ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡುವ ತೀರ್ಮಾನವನ್ನು ಕೈಗೊಂಡಿದೆ. ಇಂದಿನ ಕೋರ್‌ಕಮಿಟಿ ಸಭೆಯಲ್ಲಿ ಎಲ್ಲ ಕೋರ್‌ಕಮಿಟಿಯ ಸದಸ್ಯರುಗಳು ಭಾಗಿಯಾಗಿದ್ದರು.

ಅಮಾನತು ಆದೇಶ :ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ರೇವಣ್ಣ ಅವರನ್ನು ಅಮಾನತು ಮಾಡಬೇಕು ಎಂಬ ಜೆಡಿಎಸ್ ಕೋರ್‌ಕಮಿಟಿಯ ಶಿಫಾರಸ್ಸಿನಂತೆ ಸಂಸದ ಪ್ರಜ್ವಲ್‌ರೇವಣ್ಣ ಅವರನ್ನು ಅಮಾನತು ಮಾಡಿ ಜೆಡಿಎಸ್ ಪಕ್ಷ ಅಧಿಕೃತ ಆದೇಶ ಹೊರಡಿಸಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ಅವರ ಅನುಮೋದನೆಯಂತೆ ಹಾಸನದ ಸಂಸದ ಪ್ರಜ್ವಲ್‌ರೇವಣ್ಣ ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಜೆಡಿಎಸ್‌ನ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್ ಶಿವಕುಮಾರ್ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜ್ವಲ್‌ರೇವಣ್ಣ ಅವರು ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ್ದಾರೆ ಎನ್ನಲಾದ ವೀಡಿಯೋಗಳು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪಕ್ಷದ ಘನತೆ ಮತ್ತು ಗೌರವಗಳಿಗೆ ಮತ್ತು ಮುಖಂಡತ್ವಕ್ಕೆ ಸಾಕಷ್ಟು ಧಕ್ಕೆ ಉಂಟಾಗಿರುತ್ತದೆ. ಈ ಪ್ರಕರಣದ ಬಗ್ಗ ಎಸ್‌ಐಟಿ ತನಿಖೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಸಂವಿಧಾನ ಮತ್ತು ನಿಯಮಾವಳಿಗಳ ಅಡಿಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರಜ್ವಲ್‌ ರೇವಣ್ಣ ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಮಹಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಆದೇಶದಲ್ಲಿ ಹೇಳಿದ್ದಾರೆ.

Related Articles

Back to top button
error: Content is protected !!