ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ!

Views: 22
ಬೆಂಗಳೂರು: ಇದೇ ಏಪ್ರಿಲ್ 29ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭವಾಗಲಿದ್ದು, ಈಗ ರಾಜ್ಯದ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಉಚಿತ ಪ್ರಯಾಣಕ್ಕೆ ಅನುವು ಮಾಡಿ ಕೊಟ್ಟಿದೆ. ಪರೀಕ್ಷೆಗೆ ಹಾಜರಾಗುವವರು ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಪ್ರಕಟಣೆ ಮೂಲಕ ತಿಳಿಸಿದೆ.
ಏಪ್ರಿಲ್ 2ರಿಂದ ರಾಜ್ಯದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ 2ನೇ ಪೂರಕ ಪರೀಕ್ಷೆಯು ಪ್ರಾರಂಭವಾಗುತ್ತಿದೆ.
ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಸಂಚಾರ ಮಾಡಲು ನಿಗಮದ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲು ಅನುಮತಿ ನೀಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷರು ಪತ್ರ ಬರೆದು ಕೋರಿದ್ದಾರೆ. ಈ ಕಾರಣದಿಂದಾಗಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.
ಕ.ರಾ.ರ.ಸಾ. ನಿಗಮವು, ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯುವ ದಿನಾಂಕಗಳಂದು ಅಂದರೆ, ದಿನಾಂಕ 29.04.2024 ರಿಂದ 16.05.2024 ರವರೆಗೆ, ಪರೀಕ್ಷೆಗೆ ಹಾಜರಾಗುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ “ದ್ವಿತೀಯ ಪಿಯುಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ, ನಿಗಮದ ಎಲ್ಲ ಚಾಲಕರು ಹಾಗೂ ನಿರ್ವಾಹಕರಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹಾಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪ್ರಯಾಣಿಸಲು ಅನುಮತಿಸಲು ಸೂಕ್ತ ತಿಳಿವಳಿಕೆ ನೀಡಲು ಸೂಚಿಸಲಾಗಿದೆ.