ನಾಮಪತ್ರ ಹಿಂಪಡೆಯದಿದ್ದಲ್ಲಿ ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತಾ ಬಿಜೆಪಿ..?

Views: 51
ಬೆಂಗಳೂರು, ಪಕ್ಷದ ಆದೇಶವನ್ನು ಧಿಕ್ಕರಿಸಿ ಪ್ರತಿಷ್ಠಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಚಿಂತನೆ ನಡೆದಿದೆ. ನಾಮಪತ್ರ ಹಿಂಪಡೆಯುವ ಕೊನೆಯ ಏ.19ರ ವರೆಗೆ ಸಮಯಾವಕಾಶ ನೀಡಲು ಕೇಂದ್ರ ಬಿಜೆಪಿ ನಾಯಕರು ತೀರ್ಮಾನಿಸಿದ್ದು, ಒಂದು ವೇಳೆ ತಮ್ಮ ನಿರ್ಧಾರದಿಂದ ಈಶ್ವರಪ್ಪ ಹಿಂದೆ ಸರಿಯದಿದ್ದರೆ ಶಿಸ್ತು ಕ್ರಮದ ತೂಗುಗತ್ತಿ ಎದುರಾಗುವುದು ಖಚಿತ ಎಂದು ತಿಳಿದುಬಂದಿದೆ.
ಸ್ಪರ್ಧಾ ಕಣದಲ್ಲಿ ಉಳಿದ ಮೇಲೂ ಈಶ್ವರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಈಶ್ವರಪ್ಪ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ತಕ್ಷಣವೇ ಕ್ರಮ ಕೈಗೊಂಡರೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಪಕ್ಷ ಶುದ್ಧೀಕರಣ ಆಗಬೇಕು.ಹಿಂದುತ್ವಕ್ಕೆ ನ್ಯಾಯ ಸಿಗುವ ದಿಕ್ಕಿನಲ್ಲಿ ಪ್ರಯತ್ನ ನಡೆಸುತ್ತೇವೆ ಎಂದು ಈಶ್ವರಪ್ಪ ಶುಕ್ರವಾರ ಸುಮಾರು 30 ಸಾವಿರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವ ಮೂಲಕ ಪ್ರಬಲ ಸಂದೇಶ ರವಾನಿಸಿದ್ದಾರೆ.
ಈಶ್ವರಪ್ಪ ಜೊತೆ ನಿಕಟ ಸಂಪರ್ಕ ಇರುವ ರಾಷ್ಟ್ರೀಯ ಪ್ರಮುಖ ನಾಯಕರ ಜೊತೆ ಸಂಧಾನ ನಡೆಸುವಂತೆ ಕೇಂದ್ರ ನಾಯಕರು ಸೂಚನೆ ನೀಡಿದ್ದಾರೆ. ಒಂದು ವೇಳೆ ಅಷ್ಟಕ್ಕೂ ಜಗ್ಗದಿದ್ದರೆ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯ ಎಂಬ ಸಂದೇಶವನ್ನು ರವಾನಿಸಲಾಗಿದೆ.
ನಾಮಪತ್ರ ಪಡೆಯುವ ದಿನದವರೆಗೂ ಈಶ್ವರಪ್ಪ ವಿರುದ್ಧ ಯಾರೂ ಕೂಡ ಅನಗತ್ಯವಾಗಿ ಮಾತನಾಡುವುದು ಇಲ್ಲವೇ ವೈಯಕ್ತಿಕ ಟೀಕೆ ನಡೆಸಬಾರದು ಎಂದು ಹೇಳಿದೆ.






