ರಾಜಕೀಯ

ರೈಲಿನಲ್ಲಿ 4 ಕೋಟಿ ರೂ.ನಗದು ಸಾಗಾಟ, ಬಿಜೆಪಿ ಕಾರ್ಯಕರ್ತರ ಸೆರೆ 

Views: 94

ಚೆನ್ನೈನ ತಾಂಬರಂ ರೈಲು ನಿಲ್ದಾಣದಲ್ಲಿ 4 ಕೋಟಿ ರೂ.ನಗದು ಸಾಗಾಟ ಮಾಡುವಾಗ ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಆರೋಪಿಗಳನ್ನು ಬಿಜೆಪಿ ಸದಸ್ಯ ಹಾಗೂ ಅಗರಂ ಮೂಲದ ಎಸ್ ಸತೀಶ್ (33), ಆತನ ಸಹೋದರ ಎಸ್ ನವೀನ್ (31), ತೂತುಕುಡಿಯ ಎಸ್ ಪೆರುಮಾಳ್ (26) ಎಂದು ಗುರುತಿಸಲಾಗಿದೆ. ಎರಡನೇ ದರ್ಜೆಯ ಎಸಿ ಕೋಚ್‌ನಲ್ಲಿ ಶೋಧ ನಡೆಸಿದಾಗ ಅವರು ಸಾಗಿಸುತ್ತಿದ್ದ ಬ್ಯಾಗ್‌ಗಳಲ್ಲಿ 500ರ ನೋಟುಗಳ ಕಂತೆ ಪತ್ತೆಯಾಗಿತ್ತು. ಇವರು ಆರು ಬ್ಯಾಗ್‌ಗಳಲ್ಲಿ 4 ಕೋಟಿ ರೂ.ಹಣವನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ಮೂವರು ರೈಲಿನಲ್ಲಿ ತಿರುನಲ್ವೇಲಿಗೆ ತೆರಳುತ್ತಿದ್ದಾಗ ಫ್ಲೈಯಿಂಗ್ ಸ್ಕ್ವಾಡ್ ಅವರನ್ನು ವಶಕ್ಕೆ ಪಡೆದಿದೆ. ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ಕುರಿತು ಮಾಹಿತಿಯನ್ನು ಸ್ವೀಕರಿಸಿದ ನಂತರ, ಪೊಲೀಸರು ಮತ್ತು ತಾಂಬರಂನಲ್ಲಿ ಬೀಡುಬಿಟ್ಟಿದ್ದ ಫ್ಲೈಯಿಂಗ್ ಸ್ಕ್ವಾಡ್ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಚೆನ್ನೈನ ತಾಂಬರಂ ರೈಲು ನಿಲ್ದಾಣಕ್ಕೆ ತೆರಳಿದ್ದರು. ನಂತರ ಪೊಲೀಸರು ಮೂವರೂ ಶಂಕಿತರನ್ನು ಬಂಧಿಸಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವರದಿಗಳ ಪ್ರಕಾರ, ಐಟಿ ತಂಡಗಳು ಆರೋಪಿಗಳನ್ನು ಭಾನುವಾರ ಅಥವಾ ಸೋಮವಾರ ವಿಚಾರಣೆ ನಡೆಸಲಿವೆ.

ಇದರ ಜೊತೆಗೆ ಪೊಲೀಸರು ಕಿಲ್ಪಾಕ್, ಟ್ರಿಪ್ಲಿಕೇನ್ ಮತ್ತು ಸಾಲಿಗ್ರಾಮಮ್ ಮತ್ತು ತಿರುನಲ್ವೇಲಿ ಬಿಜೆಪಿ ಅಭ್ಯರ್ಥಿ ನೈನಾರ್ ನಾಗೇಂದ್ರನ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿಯ ಸೂಚನೆ ಮೇರೆಗೆ ನಗದು ವರ್ಗಾವಣೆ ಮಾಡಿದ್ದಾರೆ ಎಂದು ತನಿಖೆಯ ವೇಳೆ ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ. ತಿರುನಲ್ವೇಲಿ ಲೋಕಸಭಾ ಕ್ಷೇತ್ರದಲ್ಲಿ ಹಣವನ್ನು ವಿತರಿಸಲು ಇವರು ಸಾಗಾಟ ಮಾಡುತ್ತಿದ್ದರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Related Articles

Back to top button
error: Content is protected !!