ಧಾರ್ಮಿಕ

ಜಲಾಧಿವಾಸಿ ಗುಡ್ಡಟ್ಟು ಉದ್ಭವ ವಿನಾಯಕ ದೇಗುಲ

Views: 12

ಕುಂದಾಪುರದಿಂದ ಶಿವಮೊಗ್ಗ ಮಾರ್ಗದ ಯಡಾಡಿ- ಮತ್ಯಾಡಿ ಗ್ರಾಮದಲ್ಲಿ ಹಸಿರು ಕಾನನ ಮಧ್ಯೆಯ ಬಯಲಿನಲ್ಲಿ ವಿರಾಜಮಾನವಾಗಿರುವ ಈ ದೇಗುಲಕ್ಕೆ ನಿತ್ಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಗುಡ್ಡಟ್ಟು ಗಣೇಶ ವೀಕ್ಷಣೆಗೆ ಮಳೆಗಾಲವೇ ಸೂಕ್ತ ಕಾಲವಾದರೂ, ಧಾರ್ಮಿಕ ದೃಷ್ಟಿಯಿಂದ ಪ್ರವಾಸ ಕೈಗೊಳ್ಳುವರೇ ಹೆಚ್ಚು. ಬಂಡೆಯ ಗುಹೆಯ ಮಧ್ಯೆ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ ದಕ್ಷಿಣಕ್ಕೆ ಮುಖ ಮಾಡಿ ಸೊಂಡಿಲನ್ನು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹವೇ ಇಲ್ಲಿಯ ಆರಾಧ್ಯ ದೈವ. ಶ್ರೀದೇವರ ಮೂಲ ಬಿಂಬವು ವರ್ಷದ ಎಲ್ಲಾ ವೇಳೆ ಕಂಠದವರೆಗೂ ನೀರಿನಲ್ಲೇ ಮುಳುಗಿರುವುದು ಇಲ್ಲಿನ ವಿಶೇಷ. ನಿಸರ್ಗ ಪ್ರೀಯರಿಗಂತೂ ಈ ಕ್ಷೇತ್ರ ರಮಣೀಯ. ರಾಜ್ಯದ ವಿವಿದ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಐತಿಹ್ಯ ಏನು ಹೇಳುತ್ತದೆ ?
ಪುರಾಸುರನ ಸಂಹಾರ ಕಾಲದಲ್ಲಿ ಈಶ್ವರನು ಯುದ್ಧಕ್ಕೆ ಹೋಗುವಾಗ ಪ್ರಮಾದವಶಾತ್ ಗಣಪತಿಯನ್ನು ಸ್ಮರಿಸದೇ ತೆರಳುತ್ತಾನೆ. ಯುದ್ಧದಲ್ಲಿ ಜಯ ಸಿಗದೆ ಪರದಾಡುತ್ತಿರುವಾಗ ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತು ಪರಶಿವ ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ ಆದರೆ, ಯಾವ ಅಸ್ತ್ರವು ಗಣಪತಿಯನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ.

ಅದೇ ರೀತಿ ಶಿವನು ಪ್ರಯೋಗಿಸಿದ ಅಸ್ತ್ರ ಹುಸಿಯಾಗಲೂ ಸಾಧ್ಯವಿಲ್ಲ. ಈ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಅಸ್ತ್ರವು ಗಣಪತಿಯನ್ನು ಹೊತ್ತೊಯ್ದು ಮಧುಸಾಗರದಲ್ಲಿ ಕೆಡಹುತ್ತದೆ. ಮಧು ಅರ್ಥಾತ್ ಜೇನು. ಇದು ಗಣಪತಿಗೆ ಅತಿ ಪ್ರಿಯವಾದ ವಸ್ತುವಾದ ಕಾರಣ ಯಥೇಚ್ಛ ಮಧುಪಾನ ಮಾಡಿದ ಗಣಪತಿ ಸಂತೃಪ್ತಗೊಂಡು ತನ್ನನ್ನು ಇಲ್ಲಿಗೆ ತಂದು ಹಾಕಿದವರ ಕರ‍್ಯ ಜಯವಾಗಲೆಂದು ವರಪ್ರಸಾದ ಮಾಡುತ್ತಾನೆ. ತತ್ಪರಿಣಾಮ ತ್ರಿಪುರಾಸುರನ ಸಂಹಾರವಾಗಿ ಶಿವನಿಗೆ ಜಯ ಲಭಿಸುತ್ತದೆ. ಆದರೆ, ಅತಿಯಾದ ಮಧು ಸೇವನೆಯಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಉರಿ ಪ್ರಾರಂಭಿಸುವುದು ಸ್ವಾಭಾವಿಕ. ಇದೇ ಪರಿಸ್ಥಿತಿ ಗಣಪತಿಗೂ ಬಂದು ಆತ ಉಷ್ಣದಿಂದ ಒದ್ದಾಡುತ್ತಾನೆ. ಇದೇ ವೇಳೆಗೆ ಅಲ್ಲಿಗೆ ಬಂದ ಶಿವ ಗಣಪತಿಯ ಉರಿ ಶಮನಕ್ಕಾಗಿ ನರಸಿಂಹ ತೀರ್ಥದಲ್ಲಿ ಜಲಾಧಿವಾಸಿಯಾಗಿ ನೆಲಸು ಎಂದು ಗಣಪತಿಗೆ ಅನುಗ್ರಹಿಸುತ್ತಾನೆ.

ಅಂತೆಯೇ ಇಲ್ಲಿ ಹರಿಯುವ ವಾರಾಹಿ ಉಪನದಿ ನರಸಿಂಹ ತೀರ್ಥ ಪಕ್ಕದಲ್ಲಿಯ ಬಂಡೆಯ ಮಡುವಿನಲ್ಲಿ ಜಲಾಧಿವಾಸಯಾಗಿ ನೆಲೆಸಿ ಗಣಪತಿಯು ಭಕ್ತರನ್ನು ಉದ್ಧರಿಸುತ್ತಾನೆ ಎಂಬ ನಂಬಿಕೆ ಇದೆ. ಅಂದಹಾಗೆ, ಈ ದೇಗುಲದ ಗರ್ಭಗುಡಿಯು ಸುಮಾರು 800 ವರ್ಷಗಳಷ್ಟು ಪುರಾತನವಾಗಿದೆ. 1997 ರಲ್ಲಿ ನೂತನ ಗರ್ಭಗುಡಿ, ತೀರ್ಥಮಂಟಪ, ಹೆಬ್ಬಾಗಿಲು ನಿರ್ಮಿಸಲಾಗಿದೆ.

ಆಯರ್ ಕೊಡ : ಇದು ಇಲ್ಲಿನ ವಿಶೇಷ ಸೇವೆ. ಗುಹೆಯೊಳಗಿನ ನೀರನ್ನು ತಾಮ್ರದ ಕೈಬಟ್ಟಲು ಉಪಯೋಗಿಸಿ ಪೂರ್ತಿ ಖಾಲಿ ಮಾಡಲಾಗುತ್ತದೆ. ನಂತರ ದೇವರಿಗೆ ತೈಲಾಭ್ಯಂಜನ ಮಾಡಿಸಿ ರುದ್ರಾಭಿಷೇಕ ಮಾಡಲಾಗುತ್ತದೆ. ಅಭಿಷೇಕದ ನೀರು ಹೊರತೆಗೆದು ಭಕ್ತರಿಗೆ ಶ್ರೀದೇವರ ಮೂಲಬಿಂಬ ಪ್ರಸಾದ ನೀಡಲಾಗುತ್ತದೆ. ಪನಃ ಮೂಲಬಿಂಬಕ್ಕೆ ಅಲಂಕಾರ ಪೂಜೆ ನೈವೇಧ್ಯ ನೆರವೇರಿಸಿ ಪವಮಾನ ಮಂತ್ರ ಪಠಿಸುತ್ತಾ ಗುಹೆಯೊಳಗೆ ತುಂಬಿ ಹರಿಯುವಷ್ಟು ಶುದ್ಧಜಲಾಭಿಷೇಕ ಮಾಡಿ ಪೂಜಿಸಲಾಗುತ್ತದೆ. ಹೀಗೆ ಹಳೆ ನೀರು ತೆಗೆದು ಹೊಸ ನೀರಿನ ಅಭಿಷೇಕ, 2 ಬಾರಿ ರುದ್ರಾಭಿಷೇಕ, ಒಮ್ಮೆ ಪವನಾಭಿಷೇಕ ನಂತರ 1000 ಕೊಡ ಜಲ ಅಭಿಷೇಕವಾಗುವುದರಿಂದ ಈ ಸೇವೆಗೆ ಆಯರ್ ಕೊಡ ಎಂದು ಕರೆಯಲಾಗಿರುವುದು ವಿಶೇಷ.

ಹೀಗೆ ಬನ್ನಿ: ಉಡುಪಿಯಿಂದ ಬ್ರಹ್ಮಾವರ- ಬಾರ್ಕೂರು- ಶಿರಿಯಾರ- ಗುಡ್ಡಟ್ಟು ಮಾರ್ಗದಲ್ಲಿ ಬರುವುದಾದರೆ 28ಕಿ.ಮೀ. ಕುಂದಾಪುರದಿಂದ ಶಿವಮೊಗ್ಗ- ಮಾರ್ಗವಾಗಿ ಕೋಟೇಶ್ವರ –ಗುಡ್ಡಟ್ಟು ತಲುಪಲು 18 ಕಿ.ಮೀ.   ಶಿವಮೊಗ್ಗದಿಂದ ಹೊಸಂಗಡಿ – ಸಿದ್ದಾಪುರ – ಶಂಕರನಾರಾಯಣ- ಗುಡ್ಡಟ್ಟು ಮಾರ್ಗವಾಗಿ ಚಲಿಸಿದರೆ 147 ಕಿ.ಮೀ.ನಷ್ಟು ದೂರದ ಪ್ರಯಾಣವಾಗಬಲ್ಲದು.
.

Related Articles

Back to top button
error: Content is protected !!