ಇಂದಿನಿಂದ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ: ದಿನೇಶ್ ಗುಂಡೂರಾವ್

Views: 0
ಬೆಂಗಳೂರು, ದೇಶದಲ್ಲಿ ಕೊರೊನಾ ಹೊಸ ರೂಪಾಂತರಿ ಪತ್ತೆಯಾಗಿರುವ ಬೆನ್ನಲ್ಲೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ.
ಕೊಡಗು ಜಿಲ್ಲೆಯ ಕುಶಾನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್, 60ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಕೊರೊನಾ ಹೊಸ ರೂಪಾಂತರಿ ಪತ್ತೆಯಾಗಿದೆ. ಯಾರೂ ಕೂಡಾ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಆದರೂ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಲು ತೀರ್ಮಾನಿಸಿದ್ದೇವೆ. 60 ವರ್ಷ ಮೇಲ್ಪಟ್ಟವರಲ್ಲಿ ಕೆಲವರು ಹೃದಯ, ಮೂತ್ರಕೋಶ ಇತರೆ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್‌ನ್ನು ಹಾಕಿಕೊಳ್ಳುವಂತೆ ಇವರುಗಳಿಗೆ ಮನವಿ ಮಾಡಿದ್ದೇವೆ. ಹಾಗೆಯೇ ಇವರುಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಇಂದು ಆದೇಶ ಹೊರಡಿಸುತ್ತೇವೆ ಎಂದರು.
ಕೊರೊನಾ ರೂಪಾಂತರಿ ಪತ್ತೆಯಾದ ಬೆನ್ನಲ್ಲೆ ರಾಜ್ಯ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅಧಿಕಾರಿಗಳ ಸಭೆ ನಡೆಸಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಚರ್ಚೆ ಮಾಡಿದ್ದೇನೆ. ಕೇಂದ್ರ ಆರೋಗ್ಯ ಸಚಿವಾಲಯದ ಜತೆಯೂ ಸಂಪರ್ಕದಲ್ಲಿದ್ದೇವೆ ಎಂದರು.
ಕೇರಳ ಗಡಿ ಜಿಲ್ಲೆಗಳಾದ ಕೊಡಗು, ಮಂಗಳೂರು, ಚಾಮರಾಜನಗರ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಕೇರಳದಿಂದ ಬರುವವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವಂತೆ ಆದೇಶ ಮಾಡಲಾಗಿದೆ ಎಂದರು.
2-3 ದಿನಗಳಲ್ಲಿ ಹೊಸ ರೂಪಾಂತರಿಯಿಂದ ಪ್ರಕರಣಗಳು ಹೆಚ್ಚಾಗುತ್ತವೋ, ಇಲ್ಲವೋ ಎಂಬುದು ಗೊತ್ತಾಗುತ್ತದೆ. ಮುಂದಿನ ಪರಿಸ್ಥಿತಿ ನೋಡಿಕೊಂಡು ನಿರ್ಬಂಧಗಳನ್ನು ಹೇರುವ ಬಗ್ಗ ತೀರ್ಮಾನ ಮಾಡಲು ಸದ್ಯಕ್ಕೆ ಯಾವುದೇ ನಿರ್ಬಂಧ ಹೇರುವ ಅಗತ್ಯತೆ ಕಂಡು ಬಂದಿಲ್ಲ ಎಂದು ಅವರು ಹೇಳಿದರು.
ಹೊಸ ರೂಪಾಂತರಿಯಿಂದ ಕೋವಿಡ್ ಹೆಚ್ಚಾದರೆ ಅದನ್ನು ನಿಭಾಯಿಸಲು ಈಗಾಗಲೇ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಉಸಿರಾಟ, ಜ್ವರ ಸಮಸ್ಯೆ ಇರುವವರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಸಹ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.