ತಂಡಿ ವಾತಾವರಣದಿಂದ ಕಾಡುವ ಸಂಧಿವಾತದಿಂದ ಪಾರಾಗುವುದು ಹೇಗೆ..?
ಈ ರೋಗ ಪ್ರಕ್ರಿಯೆ ನಿಧಾನವಾಗಿ ಮೃದು ಎಲುಬುಗಳನ್ನು ಮತ್ತು ನಿರ್ಧಿಷ್ಟ ಜಾಗದೊಳಗಿನ ಎಲುಬನ್ನು ನಾಶಪಡಿಸಬಹುದು. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಹೋದರೆ ಇದು ಶ್ವಾಸಕೋಶ, ನರಗಳು, ಚರ್ಮ, ಕಣ್ಣುಗಳನ್ನೂ ಕೂಡ ಬಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ.

Views: 1
ಯಾರೇ ಆಗಲಿ ಸಂಧಿವಾತದ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂಥವರು ಬರಲಿರುವ ಚಳಿಗಾಲದತ್ತ ಎಚ್ಚರವಾಗಿರಿ. ಸಾಮಾನ್ಯವಾಗಿ ಚಳಿಗಾಲದ ತಂಡಿ ವಾತಾವರಣದಿಂದ ಸಂಧಿವಾತಗಳು ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡಬಹುದು ಒಂದಿಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಅದನ್ನು ಎದುರಿಸಲು ದೈಹಿಕ ಮತ್ತು ಮಾನಸಿಕವಾಗಿ ತಯಾರಾಗಬೇಕಾಗುತ್ತದೆ.
ಸಂಧಿವಾತ ಎನ್ನವುದು ಕೂಡ ಒಂದು ಕಾಯಿಲೆಯಾಗಿದ್ದು, ಅದನ್ನು ಅನುಭವಿಸಿದವರಿಗಷ್ಟೆ ಅದರ ತೀವ್ರತೆ ಗೊತ್ತಿರುತ್ತದೆ. ಇದನ್ನು ಶಾಶ್ವತವಾಗಿ ಗುಣಪಡಿಸಲಾಗದಿದ್ದರೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ನಿಯಂತ್ರಿಸಬಹುದಾಗಿದೆ.
ಈ ಕುರಿತಂತೆ ತಜ್ಞ ವೈದ್ಯರು ಒಂದಷ್ಟು ಉಪಯುಕ್ತ ಮಾಹಿತಿ ನೀಡಿದ್ದು, ಅದರಂತೆ ಹೇಳುವುದಾದರೆ ಸಂಧಿವಾತ ಎನ್ನುವುದು ಕೀಲುಗಳ ಉರಿಯೂತವಾಗಿದೆ. ಇದು ಬಾವು ಮತ್ತು ಗಡುಸಾಗುವಿಕೆಯಿಂದ ಕೂಡಿದ ಕೀಲು ನೋವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.
ಸಂಧಿವಾತವನ್ನು ಆರಂಭದಿಂದಲೂ ನಿರ್ಲಕ್ಷಿಸದೆ ಬೇಗನೆ ಚಿಕಿತ್ಸೆ ಪಡೆಯುವುದು ತುಂಬಾ ಒಳ್ಳೆಯದು. ಇಲ್ಲದೆ ಹೋದರೆ ರೋಗಿಯನ್ನು ಇನ್ನಿಲ್ಲದಂತೆ ಕಾಡಬಹುದು. ಇಲ್ಲಿ ಮುಖ್ಯವಾದ ವಿಷಯ ಏನೆಂದರೆ ಸಂಧಿವಾತ ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆಯಂತೆ.
ಸಂಧಿವಾತವನ್ನು ಆರಂಭದಿಂದಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದೆ ಹೋದರೆ ಕೈ, ಪಾದ, ಮಣಿಕಟ್ಟು, ಭುಜಗಳು, ಮೊಣಕಾಲು ಮತ್ತು ಪಾದದ ಸಣ್ಣಕೀಲುಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆನ್ನೆಲುಬುಗೂ ತೊಂದರೆಯಾಗುವ ಸಾಧ್ಯತೆಯೂ ಇದೆ.
ಸಂಧಿವಾತಕ್ಕೆ ಧೂಮಪಾನ ಒಂದು ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ನಿತ್ಯದ ವ್ಯಾಯಾಮ, ನಡೆಯುವುದು, ದೇಹದ ತೂಕ ಇಳಿಸಿಕೊಳ್ಳುವುದರಿಂದ ಸಂಧಿವಾತದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ನೋವು, ಗಡುಸಾಗುವಿಕೆ, ಬಾವು, ಕೆಂಪಾಗುವುದು ಮತ್ತು ಚಲನೆಯ ವ್ಯಾಪ್ತಿ ಕಡಿಮೆಯಾಗುವುದು ಮೊದಲಾದ ಲಕ್ಷಣಗಳ ಮೂಲಕ ಯಾವ ವಿಧದ ಸಂಧಿವಾತ ಎಂಬುದನ್ನು ಹೇಳಬಹುದಾಗಿದೆ.
ಹಲವು ರೀತಿಯ ಸಂಧಿವಾತಗಳಿದ್ದರೂ, ಎರಡು ಸಾಮಾನ್ಯ ರೂಪಗಳೆಂದರೆ ಅಸ್ಥಿ ಸಂಧಿವಾತ ಮತ್ತು ರೊಮಟಾಯ್ಡ್ ಸಂಧಿವಾತಗಳು. ಇವು ಕೀಲುಗಳಿಗೆ ಬೇರೆ, ಬೇರೆ ರೀತಿಯಲ್ಲಿ ಹಾನಿಯುಂಟು ಮಾಡಬಹುದು. ಗೌಟಿ ಸಂಧಿವಾತ, ಸೋರಿಯಾಟಿಕ್ ಸಂಧಿವಾತ, ಸ್ಪಾಂಡಿಲೊ ಸಂಧಿವಾತ, ಪ್ರತಿಕ್ರಿಯಾತ್ಮಕ ಸಂಧಿವಾತಗಳು ಕಾಣಿಸಿಕೊಳ್ಳುವುದು ಕಡಿಮೆ. ಸೋಂಕು ಕೂಡ ಸಂಧಿವಾತಕ್ಕೆ ಕಾರಣವಾಗ ಬಹುದು, ಇದಕ್ಕೊಂದು ಉದಾಹರಣೆ ಎಂದರೆ ಚಿಕುನ್ ಗುನ್ಯಾ ಸಂಧಿವಾತವಾಗಿದೆ.
ಸೂಕ್ತ ಸಮಯದಲ್ಲಿ ಚಿಕಿತ್ಸೆ ಅಗತ್ಯ
ಅತ್ಯಂತ ಸಾಮಾನ್ಯವಾದ ಅಸ್ಥಿ ಸಂಧಿವಾತದಲ್ಲಿ ಕೀಲುಗಳ ಮೃದುವಾದ ಎಲುಬುಗಳಿಗೆ ಮತ್ತು ಕೀಲಾಗಿ ರೂಪುಗೊಳ್ಳುವ ಮೂಳೆಗಳ ತುದಿಯಲ್ಲಿ ದೃಢವಾದ, ನುಣುಪಾದ ಲೇಪನಕ್ಕೆ ಸಹಜ ಹಾನಿಯಾಗುತ್ತದೆ. ಮೃದುವಾದ ಎಲುಬುಗಳು ಮೂಳೆಗಳ ತುದಿಯನ್ನು ಮೆದುವಾಗಿಸುತ್ತವೆ ಮತ್ತು ಯಾವುದೇ ಘರ್ಷಣೆಯಿಲ್ಲದ ಕೀಲಿನ ಚಲನೆಗೆ ಅನುವು ಮಾಡಿಕೊಡುತ್ತವೆ, ಆದರೆ ಮೂಳೆ ತಿರುಗುವುದರ ಪರಿಣಾಮವಾಗಿ ಹೆಚ್ಚಿನ ಹಾನಿಯಾಗಬಹುದು, ಇದರಿಂದ ನೋವಾಗುವುದರ ಜೊತೆಗೆ ಚಲನೆಗೆ ಅಡ್ಡಿಯಾಗಬಹುದು.
ಈ ಸಹಜ ಹಾನಿ ಹಲವಾರು ವರ್ಷಗಳಲ್ಲಿ ಆಗಬಹುದು ಮತ್ತು ಇಡೀ ಕೀಲಿಗೆ ಹಾನಿಯಾಗಬಹುದು. ರೊಮಟಾಯ್ಡ್ ಸಂಧಿವಾತದಲ್ಲಿ ಕೀಲಿನ ಕ್ಯಾಪ್ಸೂಲ್ ನ ಒಳಪದರದ ಮೇಲೆ ದೇಹದ ರೋಗ ನಿರೋಧಕ ಶಕ್ತಿ ದಾಳಿ ಮಾಡುತ್ತದೆ.
ಈ ರೋಗ ಪ್ರಕ್ರಿಯೆ ನಿಧಾನವಾಗಿ ಮೃದು ಎಲುಬುಗಳನ್ನು ಮತ್ತು ನಿರ್ಧಿಷ್ಟ ಜಾಗದೊಳಗಿನ ಎಲುಬನ್ನು ನಾಶಪಡಿಸಬಹುದು. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಹೋದರೆ ಇದು ಶ್ವಾಸಕೋಶ, ನರಗಳು, ಚರ್ಮ, ಕಣ್ಣುಗಳನ್ನೂ ಕೂಡ ಬಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಮಹಿಳೆಯರನ್ನು ಹೆಚ್ಚಾಗಿ ಕಾಡುವ ಸಂಧಿವಾತ
ಶಿಸ್ತಿಯಿಲ್ಲದ ಜೀವನಶೈಲಿ, ಕುಟುಂಬದ ಹಿನ್ನೆಲೆ, ವಯಸ್ಸು, ಹಳೆಯ ಕೀಲು ನೋವುಗಳು ಮತ್ತು ಬೊಜ್ಜು. ಗಂಭೀರವಾದ ಸಂಧಿವಾತಕ್ಕೆ ಕಾರಣವಾಗಬಹುದು. ಇನ್ನು ಸಂಧಿವಾತ ಯಾವುದೇ ವಯಸ್ಸು, ಲಿಂಗ, ಜನಾಂಗ, ಅಥವಾ ಯಾವುದೇ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯಲ್ಲೂ ಬರಬಹುದು. ಆದರೂ ಕೆಲವು ತರಹದ ಸಂಧಿವಾತಗಳು ಸಾಮಾಜಿಕ- ಆರ್ಥಿಕವಾಗಿ ಮೇಲಿನ ಸ್ಥಾನದಲ್ಲಿರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಒಟ್ಟಾರೆ, ಸಂಧಿವಾತ ಮಹಿಳೆಯರಲ್ಲಿ ಸಾಮಾನ್ಯವಾಗಿದೆ.
ಮುಂಜಾನೆ ಮತ್ತು ಚಳಿಗಾಲದಲ್ಲಿ ಸಂಧಿವಾತದ ನೋವು ತೀವ್ರವಾಗಿರುತ್ತದೆ. ಹೀಗಾಗಿ, ಬಿಸಿನೀರಿನ ಶಾಖ, ಬಿಸಿನೀರಲ್ಲಿ ಕೈ ಅಥವಾ ಕಾಲನ್ನು ಮುಳುಗಿಸುವುದು, ಬಿಸಿ ನೀರಸ್ನಾನ ಮಾಡುವುದು ಒಳ್ಳೆಯದು. ತೀವ್ರವಾದ ಸಂಧಿವಾತದಲ್ಲಿ ಕೀಲುಗಳು ಬೆಚ್ಚಗಿದ್ದರೆ ಕೋಲ್ಡ್ ಪ್ಯಾಕ್ ಮಾಡಬಹುದಾಗಿದೆ.
ವ್ಯಾಯಾಮ ಒಳ್ಳೆಯದಾದರೂ ನೋವು ತೀವ್ರವಿದ್ದಾಗ ಮಾಡುವುದು ಒಳ್ಳೆಯದಲ್ಲ. ಹಲವು ಕೀಲುಗಳಲ್ಲಿ ನೋವಿದ್ದಾಗ ಫಿಸಿಯೋಥೆರಪಿಯಲ್ಲಿ ಸೂಚಿಸುವ ವ್ಯಾಕ್ಸ್ ಬಾತ್ ನೆರವಿಗೆ ಬರಬಹುದು. ಒಟ್ಟಾರೆಯಾಗಿ ಹೇಳಬೇಕೆಂದರೆ ಸಂಧಿವಾತ ಕಾಣಿಸಿಕೊಂಡ ಆರಂಭದಲ್ಲಿಯೇ ತಜ್ಞವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಮತ್ತು ವೈದ್ಯರು ಹೇಳಿದ ಕ್ರಮಗಳನ್ನು ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.