ಸೇವೆ ಕಾಯಂಗೆ ಒತ್ತಾಯಿಸಿ ಅತಿಥಿ ಉಪನ್ಯಾಸಕರ ಧರಣಿ: ನಿಂತ ಪಾಠ ಪ್ರವಚನಗಳು, ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ?

Views: 0
ಸೇವಾ ವೀಲಿನಕ್ಕೆ ಒಳಪಡಿಸಬೇಕೆಂದು ಅಗ್ರಹಿಸಿ ನವೆಂಬರ್ 23ರಿಂದ ರಾಜ್ಯದ 430 ಸರಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ, ಎರಡು ದಿನಗಳಿಂದ ನಡೆಸುತ್ತಿರುವ ಧರಣಿಯಿಂದಾಗಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಕ್ಕೆ ಭಾರೀ ತೊಂದರೆ ಆಗಿದೆ.
ಏನಿದು ಪ್ರತಿಭಟನೆ..?
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 18 ವರ್ಷಗಳಿಗೂ ಮೇಲ್ಪಟ್ಟು ಅತಿಥಿ ಉಪನ್ಯಾಸಕರು ಕಡಿಮೆ ವೇತನಕ್ಕೆ ಕಾರ್ಯ ನಿರ್ವಹಿಸುತ್ತಿದ್ದು, 11500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ತಮ್ಮ ಸೇವೆಯನ್ನು ಸರಕಾರದಲ್ಲಿ ವಿಲೀನಗೊಳಿಸಿ ಎಂದು ಅಗ್ರಹಿಸಿ ನವೆಂಬರ್ 23ರಿಂದ ಅನಿರ್ದಿಷ್ಟಾವಧಿಗೆ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ.
ಸರಕಾರ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವ ಮಸೂದೆ ಮಂಡಿಸಿ ಕಾನೂನು ಬದ್ಧ ಮಂಜೂರಾತಿ ನೀಡುವ ಮೂಲಕ ಸೇವಾ ಭದ್ರತೆ ನೀಡಬೇಕು. 12 ತಿಂಗಳು ವೇತನ ನೀಡಬೇಕು. ಯುಜಿಸಿ ನೌಕರರಂತೆ ನಮಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು. ಅಲ್ಲಿಯವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಭಟನೆ ನಿರತ ಅತಿಥಿ ಉಪನ್ಯಾಸಕರು ಸರಕಾರಕ್ಕೆ ಮನವಿ ಮಾಡಿ ಧರಣಿ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ?
2023-24ನೇ ಸಾಲಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಈಗಷ್ಟೇ ಕಾಲೇಜು ಪ್ರಾರಂಭವಾಗಿ ಪಾಠ ಪ್ರವಚನಗಳು ಸುಗಮವಾಗಿ ಸಾಗುತ್ತಿದ್ದು ಎನ್ನುವಷ್ಟರಲ್ಲಿ ದಿಢೀರನೆ ಎದುರಾದ ಸಮಸ್ಯೆಗೆ ಅತಿಥಿ ಉಪನ್ಯಾಸಕರು ಪ್ರತಿಭಟನೆಗೆ ಇಳಿಯಲೇ ಬೇಕಾದ ಪ್ರಸಂಗ ಬಂದಿದ್ದರಿಂದ ವಿದ್ಯಾರ್ಥಿಗಳ ಕನಸಿಗೆ ಕೊಡಲಿ ಪೆಟ್ಟು ನೀಡಿದಂತಾಗಿದೆ.
ಪೋಷಕರು ಕೂಡ ಸರಕಾರಿ ಕಾಲೇಜುಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ಇದೆ ಎಂದು ಭಾವಿಸಿ, ತಮ್ಮ ಮಕ್ಕಳನ್ನು ತಂದು ಇಲ್ಲಿ ದಾಖಲಾತಿ ಮಾಡಿದ್ದಾರೆ ಆದರೆ ಈಗ ಉಂಟಾಗಿರುವ ಬಿಕ್ಕಟ್ಟನ್ನು ಸರಕಾರ ತುರ್ತಾಗಿ ಪರಿಹರಿಸಲು ಮುಂದಾಗದಿದ್ದರೆ ವಿದ್ಯಾರ್ಥಿಗಳು ಪೋಷಕರು ಕೂಡಿ ಪ್ರತಿಭಟನೆಯ ಹಾದಿ ತುಳಿಯುವ ಸಂಭವವಿದೆ.
ಅತಿಥಿ ಉಪನ್ಯಾಸಕರ ಪ್ರಮುಖ ಬೇಡಿಕೆಗಳೇನು?
ಯುಜಿಸಿ ನೌಕರರಂತೆ ಎಲ್ಲಾ ಸವಲತ್ತು ನೀಡುವುದು. ಸೇವೆಗೆ ಭದ್ರತೆ ಕಲ್ಪಿಸುವುದು.12 ತಿಂಗಳು ವೇತನ ನೀಡುವುದು. ಹೆರಿಗೆ ರಜೆ ಸೇರಿ ಇಎಲ್, ಸಿಎಲ್ ನೀಡುವುದು.
ಸಂಘದ ನಿಲುವೇನು?
ಹೆಚ್ಚುವರಿ ಕಾರ್ಯಭಾರಕ್ಕೆ ತೆಗೆದುಕೊಳ್ಳುವ ಉಪನ್ಯಾಸಕರನ್ನು ಹಿಂದೆ ಅರೆಕಾಲಿಕ ಉಪನ್ಯಾಸಕರು ಎಂದು ಕರೆಯುತ್ತಿದ್ದರು 2004 ರಿಂದ ಈಚೆಗೆ ‘ಅತಿಥಿ’ ಎನ್ನುವ ಪದನಾಮದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಮ್ಮ ಕೈಯಲ್ಲಿ ಆಧುನಿಕ ಜೀತಗಾರಿಕೆ ಮಾಡಿಸುತ್ತಿದೆ ಇದನ್ನು ಹೋಗಲಾಡಿಸಬೇಕಾದರೆ ಪದನಾಮ ಬದಲಾಗಬೇಕು. ನಮ್ಮ ಸೇವೆಗೆ ಭದ್ರತೆ ಕಲ್ಪಿಸಬೇಕು. 12 ತಿಂಗಳು ವೇತನ ನೀಡಬೇಕು. ಹೆರಿಗೆ ರಜೆ ಸೇರಿದಂತೆ ಇಎಲ್, ಸಿಎಲ್ ನೀಡಬೇಕು. ವಿಮೆ ವ್ಯಾಪ್ತಿಗೆ ತರಬೇಕು. ಒಮ್ಮೆ ನೇಮಕ ಆದವರನ್ನು ಸೇವಾ ಅವಧಿ ಪೂರ್ಣವಾಗಿ ಮುಂದುವರಿಸಬೇಕು. ಯುಜಿಸಿ ನಿಯಮಾವಳಿಯಂತೆ ವೇತನ ನೀಡಬೇಕು ಈ ಬಗ್ಗೆ ಸ್ಪಷ್ಟ ನಿಲುವನ್ನು ಸರಕಾರ ತೆಗೆದುಕೊಳ್ಳಬೇಕು ಎಂಬುದು ಅತಿಥಿ ಉಪನ್ಯಾಸಕರ ಅಗ್ರಹವಾಗಿದೆ.
ಪ್ರಾಂಶುಪಾಲರು ಏನಂತಾರೆ?
ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರಕಾರ ಮಕ್ಕಳ ಹಿತ ದೃಷ್ಟಿಯಿಂದ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಅವರ ಸಮಸ್ಯೆಯನ್ನು ಈ ಕೂಡಲೇ ಬಗೆಹರಿಸಬೇಕೆ ವಿನಹ ಇದರಲ್ಲಿ ನಾವೇನು ಮಾಡಲು ಆಗುವುದಿಲ್ಲ ಎಂದು ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.