ಶಿಕ್ಷಣ

5,8,9ನೇ ತರಗತಿಗಳ ಬೋರ್ಡ್ ಪರೀಕ್ಷೆ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

Views: 105

ರಾಜ್ಯ ಪಠ್ಯ ಕ್ರಮವಿರುವ ಶಾಲೆಗಳ 5,8,9 ಮತ್ತು 11ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆಗಳಿಗೆ ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಏಪ್ರಿಲ್ 8 ರಂದು ತಡೆಯಾಜ್ಞೆ ನೀಡಿದೆ. ಫಲಿತಾಂಶ ಪ್ರಕಟಿಸದಂತೆ ಆದೇಶಿಸಿದೆ.

ಯಾವುದೇ ಶಾಲೆಯಲ್ಲೂ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಬಾರದು. ಅಲ್ಲದೆ, ಫಲಿತಾಂಶವನ್ನು ಯಾವುದೇ ಉದ್ದೇಶಕ್ಕೂ ಪರಿಗಣನೆಗೆ ತೆಗೆದುಕೊಳ್ಳಬಾರದು. ಒಂದು ವೇಳೆ ಮಕ್ಕಳ ಪೋಷಕರಿಗೆ ಫಲಿತಾಂಶ ತಿಳಿಸಿಲ್ಲದಿದ್ದರೆ ತಿಳಿಸಬಾರದು ಎಂದು ನ್ಯಾಯಾಲಯ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿಥಲ್ ಅವರ ಪೀಠವು ” ಇದು ಕರ್ನಾಟಕ ರಾಜ್ಯ ಸರ್ಕಾರ ವಿದ್ಯಾರ್ಥಿಗಳು, ಅವರ ಪೋಷಕರಿಗೆ ಮಾತ್ರವಲ್ಲದೆ ಶಿಕ್ಷಕರು ಮತ್ತು ಶಾಲಾ ಆಡಳಿತಕ್ಕೂ ದೊಡ್ಡ ಸಂಕಟವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಒಂದು ಶ್ರೇಷ್ಠ ನಿದರ್ಶನ ಎಂದು ಬಣ್ಣಿಸಿದೆ.

ಹೈಕೋರ್ಟ್‌ನ ಆದೇಶವು ಪ್ರಾಥಮಿಕ ದೃಷ್ಟಿಯಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ ಅಥವಾ ಶಿಕ್ಷಣ ಹಕ್ಕು ಕಾಯಿದೆ 2009 (ಆರ್‌ಟಿಇ)ಗೆ ಹೊಂದಿಕೆಯಾಗುವುದಿಲ್ಲ ಎಂದು ಪೀಠವು ಹೇಳಿದೆ.

ಬೋರ್ಡ್ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ ಕರ್ನಾಟಕ ಮತ್ತು ಇತರರು ಸಲ್ಲಿಸಿದ ಅರ್ಜಿಗಳನ್ನು ಪೀಠವು ವಿಚಾರಣೆ ನಡೆಸುತ್ತಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, “ಶಿಕ್ಷಣ ಹಕ್ಕು ಕಾಯ್ದೆಯ ನಿಬಂಧನೆಗಳನ್ನು ಕಡೆಗಣಿಸಿ ಹೈಕೋರ್ಟ್‌ನ ಆದೇಶವನ್ನು ಜಾರಿಗೊಳಿಸಲಾಗಿದೆ. ಈ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವುದರ ವಿರುದ್ಧ ಸುಪ್ರೀಂ ಕೋರ್ಟ್ ಈ ಹಿಂದೆ ಪ್ರಾಥಮಿಕ ಅವಲೋಕನಗಳನ್ನು ಮಾಡಿತ್ತು ಎಂದು ಪೀಠಕ್ಕೆ ನೆನಪಿಸಿದರು.

ಕರ್ನಾಟಕ ರಾಜ್ಯ ಗುಣಮಟ್ಟ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯು, ಶಾಲೆಗಳು ಏಪ್ರಿಲ್ 8 ರಂದು 9 ಗಂಟೆಯ ಮೊದಲು ಬೋರ್ಡ್‌ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸುವಂತೆ ಏಪ್ರಿಲ್ 4 ರಂದು ಸಂಜೆಯ ವೇಳೆಗೆ ನಿರ್ದೇಶನ ನೀಡಿದೆ ಎಂದು ಅರ್ಜಿದಾರರು ನ್ಯಾಯಪೀಠದ ಗಮನಕ್ಕೆ ತಂದಿದೆ.

ರಾಜ್ಯ ಪಠ್ಯಕ್ರಮದ ಶಾಲೆಗಳ 5,8,9ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್‌ ಮೂಲಕ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆ ನೀಡಿತ್ತು.

ಸರ್ಕಾರ ಪ್ರಕಟಿಸಿರುವ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಸೂಚಿಸಿತ್ತು. ಇದೀಗ, ಪರೀಕ್ಷೆ ನಡೆದು ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

Related Articles

Back to top button