ಶಿಕ್ಷಣ

ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ’

"ನಮ್ಮ ಬರವಣಿಗೆ ಮತ್ತು ಬಾಷೆಯ ಅಭಿವೃದ್ಧಿಗೆ ಓದು ಅವಶ್ಯಕ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು."

Views: 179

ಕುಂದಾಪುರ:“ಪುಸ್ತಕಗಳು ಮನುಷ್ಯನ ಪರಮಮಿತ್ರ. ಅವುಗಳು ಜೊತೆಗಿದ್ದಾಗ ಒಂಟಿತನವನ್ನು ಕಳೆಯುವುದರೊಂದಿಗೆ, ಮನುಷ್ಯನ ವೈಚಾರಿಕ ಬೆಳವಣೆಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ನಮ್ಮ ಬರವಣಿಗೆ ಮತ್ತು ಬಾಷೆಯ ಅಭಿವೃದ್ಧಿಗೆ ಓದು ಅವಶ್ಯಕ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಗ್ರಂಥಾಲಯಗಳ ಸದ್ಬಳಕೆಯಾಗಬೇಕು ಆಗ ಮಾತ್ರ ಗ್ರಂಥಾಲಯ ಪಿತಾಮಹಾ ಡಾ. ಎಸ್.ಆರ್ ರಂಗನಾಥನ್‌ರವರ ಗ್ರಂಥಾಲಯ ವಿಜ್ಞಾನದ ಪಂಚಸೂತ್ರಗಳಿಗೆ ಅರ್ಥ ಬಂದಂತಾಗುತ್ತದೆ ಎಂದು ಕುಂದಾಪುರ ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕರಾದ ಮಹೇಶ್ ನಾಯ್ಕ  ಅಭಿಪ್ರಾಯ ಪಟ್ಟರು.

ಅವರು ಕೋಟೇಶ್ವರದ  ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಗ್ರಂಥಾಲಯ ಪಿತಾಮಹಾ ಎಸ್. ಆರ್ ರಂಗನಾಥನ್ ಅವರ 132ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್ ನಾಯಕ ವಹಿಸಿ, ವಿದ್ಯಾರ್ಥಿಗಳು ಓದನ್ನು ಕೇವಲ ಪಠ್ಯಕ್ರಮಗಳಿಗೆ ಸೀಮಿತವಾಗಿರಿಸದೆ ಪಠ್ಯೇತರ ವಿಷಯಗಳನ್ನು ಆಸಕ್ತಿಯಿಂದ ಓದಬೇಕು. ಗ್ರಂಥಾಲಯದಲ್ಲಿರುವ ಪುಸ್ತಕ, ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ದಿನನಿತ್ಯ ಓದುವ ಹವ್ಯಾಸವನ್ನು ರೂಢಿಸಿಕೊಂಡಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಬರೆಯುವ ಕಲೆ ಹಾಗೂ ಜ್ಞಾನವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದರಿಂದ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮವನ್ನು ಗ್ರಂಥಾಲಯ ಪಿತಾಮಹಾ ಎಸ್.ಆರ್ ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ರಾಮರಾಯ ಆಚಾರ್ಯ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಹಾಗೂ ನಾಗರಾಜ ಯು. ಸಂಚಾಲಕರು, ಆಂತರಿಕ ಗುಣಮಟ್ಟ ಭರವಸಾ ಕೋಶ, ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಘಟಿಸಿದ ಕಾಲೇಜಿನ ಗ್ರಂಥಪಾಲಕರಾದ ವೆಟರನ್ ರವಿಚಂದ್ರ ಹೆಚ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಎಸ್.ಆರ್. ರಂಗನಾಥನ್ ರವರು ಗ್ರಂಥಾಲಯದ ಜ್ಞಾನಕ್ಕೆ ನೀಡಿದ ಕೊಡುಗೆಯ ಬಗ್ಗೆ ತಿಳಿಸಿದರು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ನವ್ಯಾ ಮತ್ತು ತಂಡದವರು ಪ್ರಾರ್ಥಿಸಿದರು. ಅಂಜನಾ ವಂದಿಸಿದರು. ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button