ಯುವಜನ

10ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ: ದೊಡ್ಡಪ್ಪನ ಮಗನ ಬಂಧನ

Views: 145

ಕಲಬುರಗಿ :ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಸೊಲ್ಲಾಪೂರ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಬರ್ಗಾ ಠಾಣೆಯ ಪೋಲಿಸರು ವಿದ್ಯಾರ್ಥಿನಿಯ ದೊಡ್ಡಪ್ಪನ ಪುತ್ರನಿಗೆ ಬಂಧಿಸಿ ಜೈಲಿಗೆ ಅಟ್ಟಿದ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಆಳಂದ್ ತಾಲ್ಲೂಕಿನಲ್ಲಿ ಘಟನೆ ಸಂಭವಿಸಿದೆ. ಸ್ವತ: ದೊಡ್ಡಪ್ಪನ ಪುತ್ರನೇ ಕೃತ್ಯ ಎಸಗಿರುವುದು ಪೋಲಿಸರ ತನಿಖೆಯಲ್ಲಿ ಬಹಿರಂಗಗೊಂಡಿದೆ. ಶಾಲೆಗೆ ರಜೆ ಇದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯು ತನ್ನ ಮನೆಗೆ ಬಂದಾಗ ಸಹೋದರ ಆಕೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ರಾತ್ರಿ ಹೊತ್ತು ಎಲ್ಲರೂ ಮಲಗಿದ ಸಂದರ್ಭದಲ್ಲಿ ತಂಗಿ ಎನ್ನುವುದನ್ನೂ ಸಹ ಪರಿಗಣಿಸದೇ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎನ್ನಲಾಗಿದೆ. ಹೀಗೆ ಕಳೆದ ಮಾರ್ಚ್‍ನಿಂದ ವಿದ್ಯಾರ್ಥಿನಿ ಹಲವು ಬಾರಿ ತನ್ನ ಅಣ್ಣನಿಂದ ಅತ್ಯಾಚಾರಕ್ಕೆ ಒಳಗಾಗಿರುವ ಕುರಿತು ಪೋಲಿಸರು ಮಾಡಿದ ತನಿಖೆಯಲ್ಲಿ ಬಹಿರಂಗಪಡಿಸಿದ್ದಾಳೆ ಎನ್ನಲಾಗಿದೆ. ವಿಚಾರವನ್ನು ಬಾಯಿ ಬಿಟ್ಟರೆ ಕೊಲೆ ಮಾಡುವ ಬೆದರಿಕೆಯನ್ನೂ ಸಹ ಹಾಕಿದ್ದರಿಂದ ಆಕೆ ಅತ್ಯಾಚಾರದ ಸಂಗತಿಯನ್ನು ಮನೆಯವರಿಗೂ ಸಹ ಹೇಳದೇ ಇರುವುದು ಪ್ರಮುಖ ಕಾರಣ ಎಂಬುದು ತನಿಖೆಯಲ್ಲಿ ಹೊರಬಂದಿದೆ.

ನಂತರದ ದಿನಗಳಲ್ಲಿ ವಿದ್ಯಾರ್ಥಿನಿಯ ಹೊಟ್ಟೆ ಬೆಳೆಯತೊಡಗಿದ್ದರಿಂದ ಕುಟುಂಬಸ್ಥರು ಸಹ ನಿರ್ಲಕ್ಷಿಸಿದರು. ಆದಾಗ್ಯೂ, ಕಳೆದ 2023ರ ಡಿಸೆಂಬರ್ 24ರಂದು ಶಾಲೆಯಲ್ಲಿದ್ದಾಗ ಆಕೆಗೆ ಜೋರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿತು. ಹೀಗಾಗಿ ಶಿಕ್ಷಕರಿಗೆ ಹೇಳಿ ಆಕೆ ಸಂಬಂಧಿಕರ ಮನೆಗೆ ತೆರಳಿದಳು. ನಂತರ ಸಂಬಂಧಿಕರು ವಿದ್ಯಾರ್ಥಿನಿ ಕುಟುಂಬದವರಿಗೆ ಮಾಹಿತಿ ನೀಡಿದರು. ಬಳಿಕ ಆಕೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಯಿತು.

ಸೊಲ್ಲಾಪುರ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದಳು. ಇದರಿಂದ ಕುಟುಂಬಸ್ಥರು ತೀವ್ರ ಆಘಾತಕ್ಕೆ ಒಳಗಾದರು. ಆಕೆಗೆ ಮದುವೆಯೇ ಆಗಿಲ್ಲ, ಮಗುವಿಗೆ ಜನ್ಮ ಅಂದ್ರೆ ಹೇಗೆ ಎಂಬ ಆತಂಕದ ಮಾತುಗಳು ಹೊರಬಂದವು. ತಕ್ಷಣ ಆಸ್ಪತ್ರೆಯವರು ಮಹಾರಾಷ್ಟ್ರದ ಪೋಲಿಸರಿಗೆ ಮಾಹಿತಿ ರವಾನಿಸಿದರು. ಮಹಾರಾಷ್ಟ್ರದ ಪೋಲಿಸರು ನಿಂಬರ್ಗಾ ಠಾಣೆಯ ಪೋಲಿಸರನ್ನು ಸಂಪರ್ಕ ಮಾಡಿ ವಿಷಯ ತಿಳಿಸಿದರು. ನಿಂಬರ್ಗಾ ಠಾಣೆಯ ಪೋಲಿಸರು ಸೊಲ್ಲಾಪೂರಕ್ಕೆ ಆಗಮಿಸಿ ವಿದ್ಯಾರ್ಥಿನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅಣ್ಣನಿಂದಲೇ ಕೃತ್ಯ ಎಸಗಿರುವುದು ಪತ್ತೆಯಾಯಿತು. ಈ ಕುರಿತು ನಿಂಬರ್ಗಾ ಠಾಣೆಯ ಪೋಲಿಸರು ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Related Articles

Back to top button
error: Content is protected !!