ಹೆಮ್ಮಾಡಿ ಜನತಾ ಪ.ಪೂ.ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟ ಸಮಾರೋಪ: ಉಡುಪಿ ವಲಯಕ್ಕೆ ಸಮಗ್ರ ಪ್ರಶಸ್ತಿ
Views: 15
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಚೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ವಲಯ ಹಾಗೂ ಕಿರಿಮಂಜೇಶ್ವರದ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಹೆಮ್ಮಾಡಿಯ ಜನತಾ ಪ.ಪೂ. ಕಾಲೇಜಿನ ಕ್ರೀಡಾಂಗಣದಲ್ಲಿ 2 ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ 14 ಹಾಗೂ 17 ರ ವಯೋಮಾನದ ವಿದ್ಯಾರ್ಥಿಗಳ ಕ್ರೀಡಾಕೂಟದ ಸಮಾರೋಪದ ಸಮಾರಂಭ ಗುರುವಾರ ನಡೆಯಿತು.
ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಮಾತನಾಡಿ, ನನ್ನ ವೃತ್ತಿ ಜೀವನದ 32 ವರ್ಷಗಳಲ್ಲೇ ಅತ್ಯಂತ ಮೆರುಗು ನೀಡಿದ ಮತ್ತು ಮನಸ್ಸು ಸೆಳೆದ ಕ್ರೀಡಾಕೂಟವಾಗಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆತಿಥ್ಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಹೊರಹೊಮ್ಮಿದೆ. ಜನತಾ ಸಮೂಹ ಶಿಕ್ಷಣದ ಅಧ್ಯಕ್ಷ ಗಣೇಶ್ ಮೊಗವೀರರು ಎಲ್ಲರನ್ನೂ ಒಗ್ಗೂಡಿಸಿಕೊಂಡು, ಯಶಸ್ವಿ ಕ್ರೀಡಾಕೂಟ ನಡೆಸಿದ್ದಾರೆ ಎಂದು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ್ ಕುಮಾರ್ ಹಟ್ಟಿಯಂಗಡಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ, ಕುಲಾಲ ಸಮಾಜ ಸುಧಾರಕ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ ಕುಲಾಲ್, ಶ್ರೀಕಾಂತ ಹೆಮ್ಮಾಡಿ, ಕುಸುಮಾಕರ್ ಶೆಟ್ಟಿ ವಿಜಯ್ಕು ಮಾರ್ ಶೆಟ್ಟಿ, ಕಿಶನ್ ರಾಜ್ ಶೆಟ್ಟಿ ಕೊಂಡಳ್ಳಿ, ಪ್ರಭಾಕರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಮಂಜುನಾಥ ಶೆಟ್ಟಿ, ಸತೀಶ್ ಬಾಡಾ, ವಿಜಯ ಕುಮಾರ್, ಚಂದ್ರಕಾಂತ್, ರವೀಂದ್ರ ನಾಯ್ಕ ನಿತ್ಯಾನಂದ ಶೆಟ್ಟಿ ಸತ್ಯನಾರಾಯಣ, ಉಪಪ್ರಾಂಶುಪಾಲ ರಮೇಶ್ ಪೂಜಾರಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್‌ಶೆಟ್ಟಿ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕ ಉದಯ್ ನಾಯ್ಕ ಸ್ವಾಗತಿಸಿ, ನಿರೂಪಿಸಿದರು.
ಉಡುಪಿ ವಲಯಕ್ಕೆ ಸಮಗ್ರ ಪ್ರಶಸ್ತಿ
ಸಮಗ್ರ ಪ್ರಶಸ್ತಿಯನ್ನು ಉಡುಪಿ ವಲಯ ಪಡೆದುಕೊಂಡಿತು. ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಕಾರ್ಕಳ ವಲಯ ಪಡೆದುಕೊಂಡಿತು. ತಂಡ ವಿಭಾಗದ ಪ್ರಶಸ್ತಿಯಲ್ಲಿ 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕಾರ್ಕಳ, ಬಾಲಕಿಯರ ವಿಭಾಗದಲ್ಲಿ ಉಡುಪಿ, 17ರ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಎರಡೂ ವಿಭಾಗದ ಪ್ರಶಸ್ತಿಯನ್ನು ಉಡುಪಿ ವಲಯ ಪಡೆದುಕೊಂಡಿತು. 14 ರ ವಯೋಮಿತಿಯಲ್ಲಿ ಕುಚೂರು ಶಾಲೆಯ ಪವನ್ ಯು.ಶೆಟ್ಟಿ ಬೈಂದೂರು ರತ್ತುಬಾಯಿ ಜನತಾ ಶಾಲೆಯ ಜುನೈದ್, ಉಡುಪಿ ಸರಕಾರಿ ಗರ್ಲ್ಸ್ ಪ.ಪೂ. ಕಾಲೇಜಿನ ಪಂಚಮಿ, 17ರ ವಯೋಮಿತಿಯಲ್ಲಿ ಸೈಂಟ್ ಸಿಸಿಲಿ ಪ್ರೌಢಶಾಲೆಯ ಮಂಜುನಾಥ್ ಹಾಗೂ ನಿಟ್ಟೆ ಎನ್ ಎಸ್ ಎಎಂ ಪ್ರೌಢಶಾಲೆಯ ದೀಕ್ಷಿತಾ ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಗಳಾಗಿ ಮೂಡಿಬಂದಿದ್ದಾರೆ.






