ಹೃದಯ ಬಡಿತ ಪರೀಕ್ಷೆ ಮಾಡುವ ನೆಪದಲ್ಲಿ ಯುವತಿಯ ಮೈಮೇಲೆ ಕೈಯಾಡಿಸಿದ್ದ ವೈದ್ಯರಿಗೆ ಕ್ರಿಮಿನಲ್ ಮೊಕದ್ದಮೆ!!

Views: 93
ಬೆಂಗಳೂರಿನ ಜರಗನಹಳ್ಳಿಯಲ್ಲಿರುವ ಆಸ್ಪತ್ರೆಯಲ್ಲಿ ಎದೆ ನೋವಿನ ತಪಾಸಣೆ ನಡೆಸಲು ಬಂದ ಯುವತಿಯ ಒಳಉಡುಪುಗಳ ಬಿಚ್ಚಿಸಿದ್ದ ಆರೋಪಿ ವೈದ್ಯ , ಹೃದಯ ಬಡಿತ ಪರೀಕ್ಷೆ ಮಾಡುವ ನೆಪದಲ್ಲಿ ಮೈಮೇಲೆ ಕೈಯಾಡಿಸಿದ್ದ. ಕೊನೆಗೆ ಮುತ್ತು ನೀಡಿದ್ದ. ತಕ್ಷಣ ಯುವತಿ ದೂರು ದಾಖಲಿಸಿದ್ದರು. ಈ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಇದನ್ನು ರದ್ದು ಮಾಡುವಂತೆ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಅರ್ಜಿ ವಜಾ ಮಾಡುವ ಮೂಲಕ ಆರೋಪಿಯ ಬಂಧನವಾಗಲಿದೆ.
ವೈದ್ಯರು ತನ್ನ ವೃತ್ತಿ ನೈತಿಕತೆ ಹಾಗೂ ಜನರ ನಂಬಿಕೆ ದುರುಪಯೋಗಪಡಿಸಿಕೊಂಡರೆ ವೈದ್ಯ ಮತ್ತು ರೋಗಿಯ ನಡುವಿನ ಸಂಬಂಧಕ್ಕೆ ಅಪಚಾರವಾಗುತ್ತದೆ. ರೋಗಿಯ ದೇಹ ವೈದ್ಯಕೀಯ ತಪಾಸಣೆಗೆ ಸೀಮಿತ. ದುರುಪಯೋಗ ಸಲ್ಲ. ಪ್ರಕರಣದಲ್ಲಿ ಸ್ಪಷ್ಟವಾದ ಲೈಂಗಿಕ ಪ್ರಚೋದನೆ ಕಂಡುಬಂದಿರುವುದರಿಂದ ವೈದ್ಯರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲಾಗದು ಎಂದು ಕೋರ್ಟ್ ಹೇಳಿದೆ
ವೈದ್ಯರು ದೂರುದಾರರ ಬಳಿ ಆಕೆಯ ಶರ್ಟ್ ಮತ್ತು ಒಳ ಉಡುಪು ಬಿಚ್ಚುವಂತೆ ಹೇಳಿದ್ದಾರೆ. ಪರೀಕ್ಷೆ ಮಾಡುವುದನ್ನು ಬಿಟ್ಟು ಮೈ ಮೇಲೆ ಕೈಯಾಡಿಸಿ ಮುತ್ತು ನೀಡಿದ ಆರೋಪ ಎದುರಿಸುತ್ತಿದ್ದಾರೆ. ವೈದ್ಯರ ಈ ನಡತೆ ಐಪಿಸಿಯ ಸೆಕ್ಷನ್ 354ಎ(1)(i) ಅಡಿ ಅಪರಾಧವೆಂದು ಪರಿಗಣಿಸಲ್ಪಡುವ ಅಂಶಗಳಾಗಿರುತ್ತದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಹೇಳಿದ್ದಾರೆ.
ನಡೆದ ಪ್ರಕರಣವೇನು?
ಸಂತ್ರಸ್ತೆ ಯುವತಿ ಎದೆನೋವಿನಿಂದ ಬಳಲುತ್ತಿದ್ದರು. ಅವರು ಜೆಪಿ ನಗರದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಚಿಕಿತ್ಸೆ ನೀಡಿದ ನಂತರ ಇಸಿಜಿ ಮತ್ತು ಎದೆಯ ಎಕ್ಸ್-ರೇ ಪರೀಕ್ಷೆಗೆ ಒಳಗಾಗುವಂತೆ ವೈದ್ಯರು ಸೂಚಿಸಿದ್ದರು. ಅಲ್ಲದೆ, ವರದಿಗಳನ್ನು ವಾಟ್ಸಾಪ್ ನಲ್ಲಿ ಕಳುಹಿಸಲು ಹೇಳಿದ್ದರು. ವರದಿಗಳನ್ನು ನೋಡಿದ ವೈದ್ಯರು ಮಾರ್ಚ್ 21 ರಂದು ಮಧ್ಯಾಹ್ನ 2 ಗಂಟೆಗೆ ಜರಗನಹಳ್ಳಿಯಲ್ಲಿರುವ ತನ್ನ ಕ್ಲಿನಿಕ್‌ಗೆ ಭೇಟಿ ನೀಡುವಂತೆ ಹೇಳಿದ್ದರು.
ಅಂತೆಯೇ ಯುವತಿ ಕ್ಲಿನಿಕ್‌ಗೆ ಭೇಟಿ ನೀಡಿದಾಗ ವೈದ್ಯ ಮಾತ್ರ ಅಲ್ಲಿದ್ದರು. ತಪಾಸಣಾ ಕೋಣೆಗೆ ಕರೆದೊಯ್ದು ವೈದ್ಯರು ಮಲಗಲು ಹೇಳಿದ್ದರು. ಬಳಿಕ ಆಕೆಯ ಎದೆಯ ಮೇಲೆ ಸ್ಟೆತಸ್ಕೋಪ್ ಇಟ್ಟು ಹೃದಯ ಬಡಿತ ಪರೀಕ್ಷಿಸಲು ಪ್ರಾರಂಭಿಸಿದ್ದರು. ಮುಂದುವರಿದು ಆಕೆಯ ಬಳಿ ಶರ್ಟ್ ಮತ್ತು ಒಳ ಉಡುಪು ತೆಗೆಯಲು ಹೇಳಿದ್ದರು. ಐದು ನಿಮಿಷಗಳ ಪರೀಕ್ಷೆಯ ನಂತರ, ಕೈಗಳಿಂದ ಸ್ತನವನ್ನು ಸ್ಪರ್ಶಿಸಲು ಪ್ರಾರಂಭಿಸಿದ್ದರು.ಎಂದು ಆರೋಪಿಸಲಾಗಿದೆ. ಗಾಬರಿಗೊಂಡ ಆಕೆ ಕ್ಲಿನಿಕ್‌ನಿಂದ ಓಡಿಬಂದು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದರು. ಮರುದಿನ ಅವರು ಪುಟ್ಟೇನಹಳ್ಳಿ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ದಾಖಲಿಸಿದ್ದರು.