ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ 92% ಅಂಕ ಪಡೆದರೂ ವಿದ್ಯಾರ್ಥಿನಿ ದುಡುಕಿನ ನಿರ್ಧಾರ!
Views: 80
ಕನ್ನಡ ಕರಾವಳಿ ಸುದ್ದಿ: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟವಾದ 24 ಗಂಟೆಗಳ ನಂತರ ಶೇ.92ರಷ್ಟು ಅಂಕ ಗಳಿಸಿದ್ದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಫಲಿತಾಂಶ ಪ್ರಕಟವಾದ ಕೇವಲ 24 ಗಂಟೆಗಳ ನಂತರ ಕಾನ್ಪುರದ ವೈಶಾಲಿ ಸಿಂಗ್ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಈ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ರತನ್‌ಪುರ ಶಿವಾಲಿಕಾ ಭವನದ ನಿವಾಸಿ ವೈಶಾಲಿ ಸಿಂಗ್, ಅರ್ಮಾಪುರದ ಕೇಂದ್ರೀಯ ವಿದ್ಯಾಲಯ -1 ರಲ್ಲಿ 10 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಸಿಬಿಎಸ್‌ಇ ಮಂಡಳಿಯ ಫಲಿತಾಂಶಗಳು ಬುಧವಾರ ಸಂಜೆ ಬಿಡುಗಡೆಯಾದವು. ವೈಶಾಲಿ 92% ಅಂಕಗಳನ್ನು ಗಳಿಸಿದ್ದರು. ಕುಟುಂಬ ಮತ್ತು ಸ್ನೇಹಿತರು ಅವಳ ಸಾಧನೆಯಿಂದ ಸಂತೋಷಪಟ್ಟರು, ಆದರೆ ವೈಶಾಲಿಯೊಳಗೆ ಏನೋ ಒಡೆದಿತ್ತು.
ಗುರುವಾರ (ಜುಲೈ 16) ಸಂಜೆ 5.30ರ ಸುಮಾರಿಗೆ ಆಕೆಯ ತಾಯಿ ಕಾಜಲ್ ಹಲವಾರು ಬಾರಿ ಕರೆ ಮಾಡಿದರೂ ಉತ್ತರಿಸದಿದ್ದಾಗ, ಅವರು ತಮ್ಮ ಮಗ ಪ್ರಿನ್ಸ್‌ಗೆ ವೈಶಾಲಿಯ ಕೋಣೆಯನ್ನ ಪರಿಶೀಲಿಸುವಂತೆ ತಿಳಿಸಿದ್ದರು. ಪ್ರಿನ್ಸ್ ಮೊದಲ ಮಹಡಿಗೆ ಹೋಗಿ ನೋಡಿದಾಗ ಸಹೋದರಿ ನೇಣು ಬಿಗಿದುಕೊಂಡಿರುವುದು ಕಂಡು ಆಘಾತಕ್ಕೊಳಗಾಗಿದ್ದಾರೆ. ಕುಟುಂಬಸ್ಥರು ತಕ್ಷಣವೇ ಪಂಕಿ ಪೊಲೀಸರಿಗೆ ಮಾಹಿತಿ ನೀಡಿತು. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಆಕೆಯ ಮೊಬೈಲ್ ಫೋನ್ ಅನ್ನ ವಶಪಡಿಸಿಕೊಂಡಿದ್ದಾರೆ.
ಪೊಲೀಸರ ತನಿಖೆಯಲ್ಲಿ ವೈಶಾಲಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದ ಧ್ವನಿ ಸಂದೇಶಗಳು ಬಹಿರಂಗಗೊಂಡಿವೆ. ಅವುಗಳಲ್ಲಿ ಆಕೆ ʼನನಗೆ ಬದುಕಲು ಸಾಧ್ಯವಿಲ್ಲ… ನಾನು ಜೀವಂತ ಶವವಾಗಿದ್ದೇನೆ… ನಾನು ಇನ್ನು ಮುಂದೆ ಬದುಕಲು ಬಯಸುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ತನ್ನ ತಾಯಿ ಇಷ್ಟೊಂದು ಹಣ ಖರ್ಚು ಮಾಡುತ್ತಿದ್ದಾಳೆ. ಅವರ ಹಣ ವ್ಯರ್ಥವಾಗಬಹುದು ಅಂತಾ ನನಗೆ ತುಂಬಾ ಹೆದರಿಕೆ ಇದೆ ಆಕೆ ತನ್ನ ಸಹೋದರನಿಗೆ ತಿಳಿಸಿದ್ದಾಳೆ.
ಶಿಕ್ಷಕರ ಟೀಕೆ ಮತ್ತು ಚಿತ್ರಹಿಂಸೆಯಿಂದ ತನ್ನ ಸಹೋದರಿ ತುಂಬಾ ದುಃಖಿತಳಾಗಿದ್ದಳು. ಆಕೆ ನಿರಂತರವಾಗಿ ಭಯಪಡುತ್ತಿದ್ದಳು ಎಂದು ಸಹೋದರ ಪ್ರಿನ್ಸ್ ಆರೋಪಿಸಿದ್ದಾನೆ. 92% ಅಂಕಗಳನ್ನು ಗಳಿಸಿದ್ದರೂ, ಆಕೆಗೆ ಆತ್ಮವಿಶ್ವಾಸ ಬಂದಿರಲಿಲ್ಲ. ಆಕೆ ಭಯದಲ್ಲಿಯೇ ಇರುತ್ತಿದ್ದಳು. ಹೀಗಾಗಿಯೇ ಆಕೆ ಈ ರೀತಿಯ ದುಡುಕು ನಿರ್ಧಾರ ತೆಗೆದುಕೊಂಡಿದ್ದಾಳೆಂದು ಆತ ತಿಳಿಸಿದ್ದಾನೆ. ಶಿಕ್ಷಕರ ಕಿರುಕುಳದ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ, ಒಂದು ವೇಳೆ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.






