ಸಿಂಧಿ ಶಾಲೆಯಲ್ಲಿ 7ನೇ ತರಗತಿ ಮಕ್ಕಳಿಗೆ ತಮನ್ನಾ ಭಾಟಿಯ ಬಗ್ಗೆ ಬೋಧನೆ,: ಮಕ್ಕಳ ಪೋಷಕರ ಆಕ್ಷೇಪ

Views: 98
ಬೆಂಗಳೂರು,: ಬಹುಭಾಷಾ ನಟಿ ತಮನ್ನಾ ಭಾಟಿಯಾ ಕುರಿತ ಅಧ್ಯಾಯ ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನ ಹೆಬ್ಬಾಳದಲ್ಲಿರುವ ‘ಸಿಂಧಿ ಹೈಸ್ಕೂಲ್’ ನಲ್ಲಿನ ಪಠ್ಯದಲ್ಲಿ ನಟಿ ತಮನ್ನಾ ಭಾಟಿಯಾ ಕುರಿತ ಅಧ್ಯಾಯ ಸೇರಿಸಲಾಗಿದೆ. ಇದಕ್ಕೆ ಇಲ್ಲಿ ಓದುತ್ತಿರುವ ಏಳನೇ ತರಗತಿ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಈ ಕುರಿತು ದೂರು ದಾಖಲಿಸಿದ್ದಾರೆ.
ಈ ಅಧ್ಯಾಯ ಸೇರ್ಪಡೆ ಕುರಿತು ಪೋಷಕರು ಶಾಲೆಯ ಆಡಳಿತದ ಗಮನಕ್ಕೆ ತಂದರು. ಆದರೆ ಶಾಲಾ ಆಡಳಿತ ಮಂಡಳಿ ಏನು ತಿಳಿಸದೇ ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್’ ಸಂಪರ್ಕಿಸುವಂತೆ ಒತ್ತಾಯಿಸಿದೆ ಎಂದು ತಿಳಿದು ಬಂದಿದೆ.
ಸಿಂಧಿ ಸಮುದಾಯದ ನಟ ರಣವೀರ್ ಸಿಂಗ್ ಅವರಂತಹ ಸಮುದಾಯದ ಪ್ರಮುಖ ಮತ್ತು ಯಶಸ್ವಿ ಸದಸ್ಯರನ್ನು ಅಧ್ಯಾಯದಲ್ಲಿ ಸೇರಿಸಿದರೆ ಯಾವುದೇ ವಿರೋಧ ಇಲ್ಲ. ಆದರೆ ತಮನ್ನಾಗೆ ಸಂಬಂಧಿಸಿದ ವಿಷಯ ಸೇರ್ಪಡೆ ಸರಿಯಲ್ಲ ಎಂದು ಪೋಷಕರು ಹೇಳಿದರು.
ಹೆಬ್ಬಾಳದ ಸಿಂಧಿ ಶಾಲೆಯು ಈ ಸಮುದಾಯದ 7ನೇ ತರಗತಿಯ ಪಠ್ಯಪುಸ್ತಕ ಒಳಗೊಂಡಿದೆ. ಅದರಲ್ಲಿ ಒಂದು ಅಧ್ಯಾಯವು ದೇಶದ ವಿಭಜನೆಯ ನಂತರದ ಜೀವನ, ಸಿಂಧ್ನಲ್ಲಿ ವಲಸೆ, ಸಮುದಾಯ ಮತ್ತು ಕಲಹ, 1947 ರಿಂದ 1962 ಕುರಿತಾದ ಅಂಶಗಳು ಇವೆ. ಭಾಷಾ ಅಲ್ಪಸಂಖ್ಯಾತರಾದ ಸಿಂಧಿ ಸಮುದಾಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವಕಾಶ ಮಾಡಿಕೊಡಲಾಗಿದೆ.
ಸ್ವಾತಂತ್ರ್ಯಾ ನಂತರದ ಭಾರತೀಯರ ಜನಜೀವನ ಆಧ್ಯಾಯದಲ್ಲಿ ತಮನ್ನಾ ಭಾಟಿಯಾ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ.ಅವರು ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಾರೆ. ಅವರು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರು ಮಕ್ಕಳಿಗೆ ಆದರ್ಶವಾಗಬೇಕೇ?. ಇದು ಸರಿಯಲ್ಲ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಮತ್ತೊಂದು ಸಂಸ್ಕೃತಿಯ ಬಗ್ಗೆ ಪರಿಚಯಿಸುವ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ. ಆದರೆ ಪೋಷಕರು ನಮ್ಮ ಆಕ್ಷೇಪಣೆಯು 7ನೇ ತರಗತಿ ವಿದ್ಯಾರ್ಥಿಗಳಿಗೆ ಸೂಕ್ತವಲ್ಲದ ನಟಿಯ ಅಧ್ಯಾಯ ಒಳಗೊಂಡಿದೆ. ಇದನ್ನು ವಿರೋಧಿಸಿದರೆ, ತಮ್ಮ ವಾರ್ಡ್ಗಳಿಗೆ ವರ್ಗಾವಣೆ ಪ್ರಮಾಣಪತ್ರ ನೀಡುವುದಾಗಿ ಶಾಲಾ ಆಡಳಿತ ಮಂಡಳಿ ಬೆದರಿಕೆ ನೀಡುತ್ತಿದೆ ಎಂದು ಪೋಷಕರು ಆರೋಪಿಸಿದರು.
ತಮನ್ನಾ ಭಾಟಿಯಾ ಯಾರು?
ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಪ್ರಮುಖವಾಗಿ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು ಕೆಲ ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಕನ್ನಡದಲ್ಲಿ `ಜಾಗ್ವಾರ್’ ಮತ್ತು `ಕೆಜಿಎಫ್’ ಚಿತ್ರಗಳ ಐಟೆಮ್ ಹಾಡುಗಳಿಗೆ ನೃತ್ಯ ಮಾಡಿದ್ದಾರೆ.
1989 ಡಿಸೆಂಬರ್ 21 ರಂದು ಮುಂಬೈನಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದರು.ತಂದೆ ಸಂತೋಷ್ ಭಾಟಿಯಾ ವಜ್ರ ವ್ಯಾಪಾರಿ. ಮುಂಬೈನಲ್ಲಿಯೇ ವಿಧ್ಯಾಭ್ಯಾಸ ಮುಗಿಸಿದ ತಮನ್ನಾ ತಮ್ಮ 13 ನೇ ವಯಸ್ಸಿನಲ್ಲಿಯೇ ನಟನೆಗೆ ಇಳಿದರು.2005 ರಲ್ಲಿ ತಮ್ಮ ಹದಿನೈದನೇ ವಯಸ್ಸಿನಲ್ಲಿ `ಚಾಂದ್ ಸಾ ರೋಷನ್ ಚೆಹರಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಈ ಚಿತ್ರ ಯಶಸ್ವಿಯಾಗಲಿಲ್ಲ. ಅದೇ ವರ್ಷ ತೆಲುಗಿನ ಶ್ರೀ ಮತ್ತು ಮುಂದಿನ ವರ್ಷ ತಮಿಳಿನ ಕೇಡಿ ಚಿತ್ರಗಳಲ್ಲಿ ನಟಿಸಿದರು. ಈ ಚಿತ್ರಗಳ ನಟನೆಗೆ ಪ್ರಶಂಸೆ ಪಡೆದರು. ನಂತರ ತೆರೆಕಂಡ ಹ್ಯಾಪಿ ಡೇಸ್, ಕಲ್ಲೂರಿ ಚಿತ್ರಗಳು ತಮನ್ನಾಗೆ ಇನ್ನಷ್ಟು ಖ್ಯಾತಿ ನೀಡಿದವು. ಎರಡು ಭಾಗಗಳಲ್ಲಿ ತೆರೆಕಂಡ ಬಾಹುಬಲಿ ಚಿತ್ರ ತಮನ್ನಾ ಭಾರತದಾದ್ಯಂತ ಜನಪ್ರಿಯತೆ ತಂದು ಕೊಟ್ಟಿತು.