ಶಿಕ್ಷಣ

ಸಮೋಸ ತಿಂದ ನಾಲ್ವರು ಅನಾಥಾಶ್ರಮದ ಮಕ್ಕಳು ಸಾವು 

Views: 65

ಆಂಧ್ರ ಪ್ರದೇಶ ಇಲ್ಲಿನ ಅನಾಥಾಶ್ರಮದಲ್ಲಿ ಸಂಜೆ ವೇಳೆ ಸ್ನಾಕ್ಸ್ ಆಗಿ ಕೊಟ್ಟ ಕುರುಕಲು ತಿಂಡಿ ಸಮೋಸ ತಿಂದು 27 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಅವರಲ್ಲಿ ನಾಲ್ವರು ಮಕ್ಕಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆಯ ಕೈಲಾಸಪಟ್ಟಣಂ ಎಂಬಲ್ಲಿ ಕ್ರಿಶ್ಚಿಯನ್ ಸಂಘಟನೆ ಈ ಅನಾಥಾಶ್ರಮವನ್ನು ನಡೆಸುತ್ತಿದೆ. ವಸತಿ ಮತ್ತು ಶಿಕ್ಷಣವನ್ನೂ ನೀಡುತ್ತಿರುವ ಸಂಸ್ಥೆಯಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಸಂಜೆ ಉಪಾಹಾರಕ್ಕೆ ಸಮೋಸ ತಿಂಡಿ ನೀಡಲಾಗಿದೆ. ಇದನ್ನು ತಿಂದ ಬಳಿಕ ವಿದ್ಯಾರ್ಥಿಗಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಮೊದಲು ನಾಲ್ವರು ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದಾರೆ. ವಿಷಯ ತಿಳಿದ ಸಂಘಟಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಇದರ ಬಳಿಕ ಇನ್ನೂ 23 ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಉಂಟಾಗಿದೆ. ಎಲ್ಲರನ್ನೂ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದರಲ್ಲಿ ನಾಲ್ವರು ಮಕ್ಕಳು ಸೋಮವಾರ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಮೃತರನ್ನು ಚಿಂತಪಲ್ಲಿ ಮಂಡಲದ ನಿಮ್ಮಲಪಾಲೆಂನ ಜೋಶುವಾ, ಕೊಯ್ಯೂರು ಮಂಡಲದ ಭವಾನಿ ಮತ್ತು ಚಿಂತಪಲ್ಲಿಯ ಶ್ರದ್ಧಾ ಮತ್ತು ನಿತ್ಯಾ ಎಂದು ಗುರುತಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಲ್ಲಿ ಕೆಲವರು ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಕುರುಕಲು ತಿಂಡಿಯಾದ ಸಮೋಸಾದಲ್ಲಿ ಕಲುಷಿತ ಸೇರಿರುವ ಶಂಕೆ ಇದೆ. ಇದರಿಂದ ಮಕ್ಕಳಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು.

 

Related Articles

Back to top button