ಶಾಲೆಗಳಲ್ಲಿ ಇನ್ನು ಮುಂದೆ ಕೃಷ್ಣಾಷ್ಟಮಿ, ಗಣೇಶೋತ್ಸವ ಮೊದಲಾದ ಹಬ್ಬಗಳನ್ನು ಆಚರಿಸುವಂತಿಲ್ಲ

Views: 670
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಶಾಲೆಗಳಲ್ಲಿ ಇನ್ನು ಮುಂದೆ ಕೃಷ್ಣಾಷ್ಟಮಿ, ಗಣೇಶೋತ್ಸವ ಮೊದಲಾದ ಹಬ್ಬಗಳನ್ನು ಆಚರಿಸುವಂತಿಲ್ಲ. ಶಾಲೆಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಡೆಸದಂತೆ ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು(ಡಿಡಿಪಿಐ) ಜ್ಞಾಪನಾ ಪತ್ರ ಹೊರಡಿಸಿದ್ದು, ವಿವಾದ ಸೃಷ್ಟಿಸಿದೆ.
ಜ್ಞಾಪನಾ ಪತ್ರವನ್ನು ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಹಬ್ಬಗಳ ಆಚರಣೆ ಕುರಿತು ನಾಗರಿಕ ಸಮಿತಿ ಮುಖಂಡರು ಶಾಲೆಗಳಿಗೆ ಭೇಟಿ ನೀಡಿ ಅನುಮತಿ ಕೇಳಿದಾಗ ಶಿಕ್ಷಣ ಇಲಾಖೆ ಜ್ಞಾಪನಾ ಪತ್ರ ಹೊರಡಿಸಿರುದು ಬೆಳಕಿಗೆ ಬಂದಿದೆ.
ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಮೈದಾನ ಅಥವಾ ಆವರಣವನ್ನು ಯಾವುದೇ ಸಂದರ್ಭದಲ್ಲಿ ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು
ಅನುಮತಿಯನ್ನೂ ನೀಡಬಾರದು. ಅಲ್ಲದೆ ಅನುಮತಿಗಾಗಿ ಡಿಡಿಪಿಐ ಕಚೇರಿಗೂ ಪ್ರಸ್ತಾವನೆ ಸಲ್ಲಿಸಬಾರದು ಎಂದು ಸೂಚಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ
ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆಯಾಗುತ್ತಾರೆ ಎಂದು ಜ್ಞಾಪನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.