ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್
Views: 13
ಕನ್ನಡ ಕರಾವಳಿ ಸುದ್ದಿ: ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್ಐ) ಮತ್ತು ಪೊಲೀಸ್ ಕಾನ್ಸ್ಟೇಬಲ್ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ಮಾಡಿ, ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ನಡೆದಿದೆ.
ಕೆರೂರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಪೊಲೀಸ್ ಸಿಬ್ಬಂದಿ ಸಂತೋಷ ಬಿರಾದಾರ ಅವರು ಲೋಕಾಯುಕ್ತ ಬಲೆಗೆ ಬಿದ್ದವರು. ಬೆಳಗಂಟಿ ಗ್ರಾಮದ ನಿವಾಸಿ ಮುತ್ತಪ್ಪ ಹುಲಪ್ಪ ನಾಯ್ಕರ ಅವರಿಂದ 1.70 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾಯಕ್ತರು ದಾಳಿ ಮಾಡಿದ್ದಾರೆ.
ಇಸ್ಪೀಟು ಹಾಗೂ ಬಡ್ಡಿ ವ್ಯವಹಾರದ ಬಗ್ಗೆ ಸುಳ್ಳು ಕೇಸ್ ಹಾಕುತ್ತೇನೆ ಎಂದು ಪಿಎಸ್ಐ ಮತ್ತು ಸಿಬ್ಬಂದಿ ಬೆದರಿಕೆ ಹಾಕಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬೈಕ್ ಸಮೇತ ಠಾಣೆಗೆ ಕರೆದೊಯ್ದು ಬೆದರಿಕೆ ಹಾಕಿದ್ದಾರೆ ಎಂದು ಮುತ್ತಪ್ಪ ಲೋಕಾಯುಕ್ತರಿಗೆ ದೂರು ನೀಡಿದ್ದರು.
1.70 ಲಕ್ಷ ರೂ ಹಣ ನೀಡಿದ್ರೆ ಬಿಟ್ಟು ಕಳಿಸುವುದಾಗಿ ಕಳೆದ ರಾತ್ರಿಯವರೆಗೆ ಠಾಣೆಯಲ್ಲೇ ಕೂರಿಸಿಕೊಂಡಿದ್ದರು. ಬಳಿಕ ಊರಿಗೆ ಹೋಗಿ ಹಣ ತರುವುದಾಗಿ ಹೇಳಿ ದೂರುದಾರ ರಾತ್ರಿ ತಮ್ಮ ಗ್ರಾಮಕ್ಕೆ ಬಂದಿದ್ದರು. ಆದರೆ ಹಣ ಕೂಡಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣವೇ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರ್ಯಾಚರಣೆ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಬಿ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುರೇಶ ರೆಡ್ಡಿ ನೇತೃತ್ವದಲ್ಲಿ ಸಿಬ್ಬಂದಿಯ ನೇತೃತ್ವದಲ್ಲಿ ದಾಳಿ ಮಾಡಿದ್ದು, ಆರೋಪಿಗಳನ್ಙು ವಿಚಾರಣೆಗೆ ಒಳಪಡಿಸಿದ್ದಾರೆ.






