ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಕೆಗೆ ಅರ್ಹತೆಗಳೇನು ?

Views: 50
ಬೆಂಗಳೂರು,:ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ 2024ನೇ ಸಾಲಿನ ‘ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಗತ್ಯ ದಾಖಲೆಗಳ ಜೊತೆ ಅರ್ಜಿಗಳನ್ನು ಸಲ್ಲಿಕೆ ಮಾಡಲು 15/7/2024ರ ತನಕ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿ. ಬಿ. ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ 2024ನೇ ಸಾಲಿನ ‘ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಹರು ನಿಗದಿತ ಅವಧಿಯಲ್ಲಿ ಆನ್-ಲೈನ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಲು ನಿಯಮಾನುಸಾರ ಅಗತ್ಯ ಕ್ರಮವಹಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.
ಪ್ರಾಚಿ ಪಾಂಡೆ, ಜಂಟಿ ಕಾರ್ಯದರ್ಶಿಗಳು (ಐ & ಟಿ), ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಮಂತ್ರಾಲಯ ಇವರ ಪತ್ರವನ್ನು ಉಲ್ಲೇಖ ಮಾಡಲಾಗಿದ್ದು. ದಿನಾಂಕ 27/6/2024 ರಿಂದ 15/7/2024ರ ವರೆಗೆ ಅವಕಾಶ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಿರುತ್ತದೆ, ಅರ್ಜಿ ಸಲ್ಲಿಕೆ ಮಾಡಲು ಅರ್ಹತೆಗಳನ್ನು ಸಹ ಪ್ರಕಟಿಸಲಾಗಿದೆ.
ಅರ್ಹತೆಗಳು: ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಮತ್ತು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ದೇಶದಾದ್ಯಂತ ಶಿಕ್ಷಕರು ನೀಡಿರುವ ಅನನ್ಯ ಸೇವೆಯನ್ನು ಸ್ಮರಿಸಿ, ಅಂತಹ ಅತ್ಯುತ್ತಮ ಶಿಕ್ಷಕರನ್ನು ಗೌರವಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ವತಿಯಿಂದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರತಿ ವರ್ಷ ಪ್ರದಾನ ಮಾಡಲಾಗುತ್ತಿದೆ.
ಅದರಂತೆ, 2024ನೇ ಸಾಲಿನ ‘ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಅರ್ಹ ಶಿಕ್ಷಕರು/ ಉಪನ್ಯಾಸಕರು/ ಮುಖ್ಯ ಶಿಕ್ಷಕರು/ ಪ್ರಾಂಶುಪಾಲರು https://nationalawardstoteachers.education.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯ ಅರ್ಹತೆಗಳನ್ನು ನಿಗದಿ ಮಾಡಿದೆ.
ರಾಜ್ಯದ ಅರ್ಹ ಶಿಕ್ಷಕರು (ಪ್ರತಿ ಜಿಲ್ಲೆಯಿಂದ ಕನಿಷ್ಟ 50-60 ಮಂದಿ) ನಿಗದಿತ ಅವಧಿಯೊಳಗೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರಮವಹಿಸಬೇಕು. ಅರ್ಜಿದಾರರಿಗೆ, ಶಾಲೆ ಮತ್ತು ಕಾಲೇಜುಗಳ ಮುಖ್ಯಸ್ಥರಿಗೆ ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಈ ಕುರಿತು ತಿಳಿಸಬೇಕು ಎಂದು ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ.
* ರಾಜ್ಯ ಸರ್ಕಾರದ, ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಮತ್ತು ರಾಜ್ಯ ಸರ್ಕಾರಕ್ಕೆ/ ರಾಜ್ಯ ಮಂಡಳಿಗೆ ಸಂಯೋಜನೆಗೊಂಡಿರುವ (ರಾಜ್ಯ ಸರ್ಕಾರದಿಂದ ನೋಂದಣಿ & ಮಾನ್ಯತೆ ಪಡೆದಿರುವ) ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿನ ಖಾಯಂಗೊಂಡ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದ ಹಾಗೂ ಕನಿಷ್ಟ 10 ವರ್ಷಗಳ ಸೇವೆಯನ್ನು ಪೂರೈಸಿರುವ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಅರ್ಜಿ ಸಲ್ಲಿಸಲು ಅರ್ಹರು.
* ಕೇಂದ್ರ ಸರ್ಕಾರದ ಮತ್ತು ಸಿಬಿಎಸ್‌ಇ ಹಾಗೂ ಸಿಐಎಸ್‌ಸಿಇ ಸಂಯೋಜನೆ ಪಡೆದಿರುವ/ ಮಾನ್ಯತೆ ಪಡೆದ ಶಾಲೆಗಳ ಹಾಗೂ ಪದವಿ ಪೂರ್ವ ಕಾಲೇಜುಗಳ ಖಾಯಂಗೊಂಡ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದ ಹಾಗೂ ಕನಿಷ್ಟ 10 ವರ್ಷಗಳ ಸೇವೆಯನ್ನು ಪೂರೈಸಿರುವ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಅರ್ಹರು.
* ಈ ಕ್ಯಾಲೆಂಡರ್ ವರ್ಷದಲ್ಲಿ ಕನಿಷ್ಠ ನಾಲ್ಕು ತಿಂಗಳು ಅಂದರೆ, ದಿನಾಂಕ 30/04/2024ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮೇಲ್ಕಂಡ ಶಾಲೆಗಳ ಹಾಗೂ ಪದವಿ ಪೂರ್ವ ಕಾಲೇಜುಗಳ ಖಾಯಂಗೊಂಡಿದ್ದ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದಿದ್ದ ಹಾಗೂ ಕನಿಷ್ಟ 10 ವರ್ಷಗಳ ಸೇವೆಯನ್ನು ಪೂರೈಸಿದ್ದ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು.
ಈ ಅರ್ಹತೆ ಹೊಂದಿರುವವರು ‘ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ-2024’ ಪ್ರಶಸ್ತಿಗೆ ಆಯ್ಕೆಯಾಗ ಬಯಸಿ ಆನ್-ಲೈನ್ ಪೋರ್ಟಲ್ ಮೂಲಕ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಶೈಕ್ಷಣಿಕ ಆಡಳಿತಗಾರರು, ಶಿಕ್ಷಣ ಪರಿವೀಕ್ಷಕರು, ತರಬೇತಿ ಸಂಸ್ಥೆಗಳ ಸಿಬ್ಬಂದಿಗಳು, ಗುತ್ತಿಗೆ, ಶಿಕ್ಷಣಮಿತ್ರ, ಅರಕಾಲಿಕ, ಗೌರವ, ಅತಿಥಿ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಸದರಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.