ಯಡಾಡಿ-ಮತ್ಯಾಡಿ ಲಿಟಲ್ ಸ್ಟಾರ್ (ವಿದ್ಯಾರಣ್ಯ) ಶಾಲೆಯಲ್ಲಿ ಭಿತ್ತಿ ಪತ್ರಿಕೆ, ಮಕ್ಕಳ ಮಾಸಿಕ ಹಸ್ತ ಪತ್ರಿಕೆ ಅನಾವರಣ

Views: 44
ಕುಂದಾಪುರ: ಜಗತ್ತಿನಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದವರು ಹಳ್ಳಿಯ ಶಾಲೆಯಲ್ಲಿಯೇ ಓದಿದವರು ಈ ನಿಟ್ಟಿನಲ್ಲಿ ಯಾರಿಗೂ ಕೀಳರಿಮೆ ಬೇಡ, ವಿದ್ಯಾರ್ಥಿಗಳು ಮೊಬೈಲ್, ಚಾಟಿಂಗ್, ಕ್ರಿಕೆಟ್ ಹಾಗೂ ಸಿನಿಮಾದಿಂದ ದೂರ ಉಳಿದರೆ ಶಿಕ್ಷಣದಲ್ಲಿ ಇನ್ನಷ್ಟು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯ ಎಂದು ಮಂಗಳೂರಿನ ಶ್ರೀರಾಮಕೃಷ್ಣ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ಆಗಸ್ಟ್ 13ರಂದು ಯಡಾಡಿ- ಮತ್ಯಾಡಿ ಲಿಟಲ್ ಸ್ಟಾರ್ (ವಿದ್ಯಾರಣ್ಯ) ಆಂಗ್ಲ ಮಾಧ್ಯಮ ಶಾಲೆ, ಸುಜ್ಞಾನ ಎಜುಕೇಶನ್ ಟ್ರಸ್ಟ್ ಕುಂದಾಪುರ ಇವರ ವತಿಯಿಂದ ನಡೆದ ಭಿತ್ತಿ ಪತ್ರಿಕೆ ಹಾಗೂ ಮಕ್ಕಳ ಮಾಸಿಕ ಹಸ್ತ ಪತ್ರಿಕೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಅಜ್ಜರಕಾಡು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ ಅವರು ಸುಜ್ಞಾನ್ ಶಾಲಾ ಗೋಡೆ ಪತ್ರಿಕೆ ಅನಾವರಣಗೊಳಿಸಿ, ಮಾತನಾಡಿದ ಅವರು,ಶಾಲೆಗಳು ಇಂತಹ ಗ್ರಾಮೀಣ ಪ್ರದೇಶದಲ್ಲಿ ಇದ್ದರೆ ಈ ಮಣ್ಣಿನ ವಾಸನೆ, ಸಂಸ್ಕೃತಿ ಪರಿಸರದೊಂದಿಗೆ ಬೆರೆತು ಸೃಜನಾತ್ಮಕತೆ ಶಿಕ್ಷಣ ಪಡೆದಾಗ ಶಿಕ್ಷಣ ಮೇಳೈಸುತ್ತದೆ. ಇಂತಹ ಉತ್ತಮ ಶಿಕ್ಷಣ ಸಂಸ್ಥೆಯಿಂದ ಈ ನಾಡಿನ ಶಕ್ತಿಯಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.
ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ನಿವೇದಿತಾ ಬಾದಾಮಿ (ನರೇಂದ್ರ ಆಶಯ) ಶ್ರೇಯ ಕೆ ಬೆಂಗಳೂರು(ಅಮ್ಮ) ಸುಮತಿ ಶೆಟ್ಟಿ (ಪರಿಸರ ಕಾಳಜಿ) ತನ್ವಿ(ಅಪ್ಪ ಅಮ್ಮ) ಹಾಗೂ ಸಾನ್ವಿ (ಪರಿಸರ) ಅವರ ಕಾವ್ಯ ವಾಚನಗಳು ಪ್ರಸ್ತುತಿಗೊಂಡಿತು.
ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಖಜಾಂಚಿ ಭರತ್ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲ ಸಂದೀಪ್ ಕೆ ಹಾಗೂ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಭಾಷಾ ಶಿಕ್ಷಕ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪ್ರಾಂಶುಪಾಲ ಪ್ರದೀಪ್ ಕೆ ವಂದಿಸಿದರು.