ಮಾಣಿಕ್ಯಧಾರಾ ಜಲಪಾತದ ಬಳಿ ಬಾಲಕಿ ನಾಪತ್ತೆ; ಮುಂದುವರಿದ ಶೋಧ, ಹಲವು ಅನುಮಾನ!
Views: 50
ಕನ್ನಡ ಕರಾವಳಿ ಸುದ್ದಿ:ಬಾಲಕಿ ನಾಪತ್ತೆ ಆದ ಜಾಗ ತೀವ್ರ ಕಡಿದಾದ ಪ್ರದೇಶವಾಗಿದ್ದು ಅಲ್ಲಿಂದ ಯಾವ-ಯಾವ ಮಾರ್ಗದಲ್ಲಿ ಹೋಗಲು ಸಾಧ್ಯವಿರುತ್ತೋ ಆ ಮಾರ್ಗದಲ್ಲೆಲ್ಲಾ ತಂಡ ಹುಡುಕಾಡುತ್ತಿದೆ. ಆದರೆ, ಜಾರಿದ್ದಾಳೆ ಅನ್ನೋದಕ್ಕೆ ಮಳೆ ಇಲ್ಲ. ಕಾಡು ಬೇಸಿಗೆಗೆ ಒಣಗಿ ಬಿಡಿಬಿಡಿಯಾಗಿದೆ. ನಾಪತ್ತೆಯಾದ ಒಂದು ಗಂಟೆಯಿಂದಲೇ ಹತ್ತಾರು ಜನ ಹುಡುಕಾಡಿದರೂ ಸಿಗದಿರೋದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬಾಲಕಿ ಕಾಣೆಯಾಗುವ ಮೊದಲು ತನ್ನ ತಂದೆಯ ಮೊಬೈಲ್‌ನಲ್ಲಿ ಸಂಬಂಧಿಕರೊಂದಿಗೆ ರೀಲ್ಸ್ ಮಾಡಿದ್ದಳು. ಅಲ್ಲದೆ ಮಾಣಿಕ್ಯಧಾರಾದಲ್ಲಿ ಕುಟುಂಬಸ್ಥರ ಜೊತೆ ಫೋಟೋ ತೆಗೆಸಿಕೊಂಡು ಸಂಜೆ 5:30 ರವರೆಗೆ ಅವರೊಂದಿಗೇ ಇದ್ದಳು. ಆದರೆ ಜಲಪಾತದ ಮೆಟ್ಟಿಲುಗಳನ್ನು ಇಳಿದು ಬರುವ ಸಂದರ್ಭದಲ್ಲಿ ಬಾಲಕಿ ದಿಢೀರ್ ಎಂದು ನಾಪತ್ತೆಯಾಗಿದ್ದಾಳೆ. ಈ ಘಟನೆ ನಡೆದು 36 ಗಂಟೆ ಕಳೆದರೂ ಬಾಲಕಿಯ ಯಾವುದೇ ಸುಳಿವು ಲಭ್ಯವಾಗಿಲ್ಲ. ಮಂಗಳವಾರ ಸಂಜೆಯಿಂದಲೇ ಪೊಲೀಸ್, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಡ್ರೋನ್ ಕ್ಯಾಮೆರಾದ ಮೂಲಕವೂ ಪತ್ತೆ ಹಚ್ಚುವ ಕೆಲಸ ಮುಂದುವರೆದಿದೆ.
ಬಾಲಕಿ ಕಾಣೆಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಆಕೆಯ ಪೋಷಕರು ರಾತ್ರಿ 8:30ಕ್ಕೆ ಐ.ಡಿ ಪೀಠ ಪೊಲೀಸ್ ಹೊರ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಕ್ಷಣವೇ ಕಾರ್ಯ ಪ್ರವೃತ್ತರಾಗಿದ್ದಾರೆ. ರಾತ್ರಿ 9:30ರ ಸುಮಾರಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯನ್ನೊಳಗೊಂಡ ಜಂಟಿ ಶೋಧನಾ ತಂಡವನ್ನು ರಚಿಸಿ, ಸ್ಥಳೀಯ ಪ್ರದೇಶಗಳಲ್ಲಿ ತೀವ್ರವಾಗಿ ಹುಡುಕಾಟ ನಡೆಸಲಾಗಿದೆ.
ಶೋಧ ಕಾರ್ಯಕ್ಕಾಗಿ ಅರಣ್ಯ ಇಲಾಖೆಯಿಂದ ಥರ್ಮಲ್ ಡೋನ್ ಕ್ಯಾಮೆರಾಗಳನ್ನು ಬಳಸಲಾಗಿದ್ದು, ಪ್ರಸ್ತುತ ಎಸ್‌ಡಿಆರ್‌ಎಫ್ ತಂಡವೂ ಪೊಲೀಸರೊಂದಿಗೆ ಕೈಜೋಡಿಸಿದೆ. ಸದ್ಯ ಪೊಲೀಸ್, ಅರಣ್ಯ ಇಲಾಖೆ ಹಾಗೂ ಎಸ್‌ಡಿಆರ್‌ಎಫ್‌ನ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದು ಕುಟುಂಬದವರೊಂದಿಗೆ ಕೈಗೊಂಡಿದ್ದ ಪ್ರವಾಸವಾಗಿದ್ದು, ಪೋಷಕರ ಜೊತೆಗೆ ಬಾಲಕಿಯ ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಅಜ್ಜ-ಅಜ್ಜಿಯರೂ ಜೊತೆಗಿದ್ದರು ಎಂದು ತಿಳಿಸಿದರು.






