ಆರೋಗ್ಯ

ಮರವಂತೆ: ಸ್ವಯಂಪ್ರೇರಿತ ರಕ್ತದಾನ ಶಿಬಿರ

Views: 26

ಮರವಂತೆ ರಕ್ತದಾನ ದಾನ ಮಾಡುವುದರಿಂದ ವಿವಿಧ ಕಾರಣಕ್ಕಾಗಿ ರಕ್ತದ ಅಗತ್ಯ ಇರುವವರಿಗೆ ರಕ್ತನೀಡಿ ಜೀವದಾನ ಮಾಡಬಹುದು. ಅದೇ ವೇಳೆಗೆ ದಾನಿಗಳ ಆರೋಗ್ಯವರ್ಧನೆಯಾಗುತ್ತದೆ ಎಂದು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ. ಗಣೇಶ ಭಟ್ ಹೇಳಿದರು.

ಭಾನುವಾರ ಮರವಂತೆಯ ರಕ್ತದಾನಿಗಳ ಬಳಗ, ಉಡುಪಿಯ ಅಭಯಹಸ್ತ ಚಾರಿಟಬಲ್ ಟ್ರಸ್ಟ್, ಕುಂದಾಪುರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಮರವಂತೆಯ ಎಲ್ಲ ಸಂಘಸಂಸ್ಥೆಗಳ ಆಶ್ರಯದಲ್ಲಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಕ್ತನಿಧಿಗಳಲ್ಲಿ ರಕ್ತದ ಕೊರತೆ ಕಾಡುತ್ತಿದೆ. ಅದನ್ನು ನೀಗಲು ಯುವಜನರು ಮುಂದಾಗಬೇಕು. ನಿಯತಕಾಲಿಕವಾಗಿ ರಕ್ತದಾನ ಮಾಡುವುದರಿಂದ ದಾನಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವುದಿಲ್ಲ. ಬದಲಾಗಿ ಅವರ ಆರೋಗ್ಯವರ್ಧಿಸುತ್ತದೆ. ಅವರಲ್ಲಿರಬಹುದಾದ ಅಧಿಕ ಕೊಲೆಸ್ಟರಾಲ್, ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ ಎಂದು ಅವರು ಹೇಳಿದರು.

ಅಭಯಹಸ್ತ ಚಾರಿಟಬಲ್ ಟ್ರಸ್ಟ್ನ ಸತೀಶ ಸಾಲಿಯಾನ್ ಉದ್ಘಾಟಿಸಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಅಧ್ಯಕ್ಷ ಡಾ. ಜಯಕರ ಶೆಟ್ಟಿ, ಕೋಶಾಧಿಕಾರಿ ಡಾ. ಶಿವರಾಮ ಶೆಟ್ಟಿ, ವಿಶ್ರಾಂತ ಉಪನ್ಯಾಸಕ ಎಸ್. ಜನಾರ್ದನ, ಮರವಂತೆ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ ಖಾರ್ವಿ ಅತಿಥಿಗಳಾಗಿದ್ದರು.

ಪುನೀತ್ ದೇವಾಡಿಗ ಸ್ವಾಗತಿಸಿದರು. ವಿಘ್ನೇಶ್ ಖಾರ್ವಿ ವಂದಿಸಿದರು. ರವಿ ಮಡಿವಾಳ ನಿರೂಪಿಸಿದರು. ಸಂಘಟನೆಗಳ ವತಿಯಿಂದ ಸತೀಶ್ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು. ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು, ಶಿಬಿರದ ಯಶಸ್ಸಿಗೆ ಸಹಕರಿಸಿದವರನ್ನು ಗುರುತಿಸಲಾಯಿತು. ಶಿಬಿರದಲ್ಲಿ 65 ಯುನಿಟ್ ರಕ್ತ ಸಂಗ್ರಹಿಸಲಾಯಿತು.

Related Articles

Back to top button