ಮದುವೆಯ ದಿನವೇ ಅಂಗಾಂಗ ದಾನದ ಪತ್ರಕ್ಕೆ ಸಹಿ ಮಾಡಿದ ನವಜೋಡಿ
Views: 30
ಕನ್ನಡ ಕರಾವಳಿ ಸುದ್ದಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ನವ ದಂಪತಿಗಳಾದ ವಾಗೀಶ ಗುರುಮೂರ್ತಯ್ಯ ಕಾಡದೇವರಮಠ ಹಾಗೂ ಕೋಮಲ್ ವಾಗೀಶ ಕಾಡದೇವರಮಠ ಇಂದು(ಫೆ.12) ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಈ ಮದುವೆ ಕೇವಲ ಅರತಕ್ಷತೆ, ಔತಣಕೂಟಕ್ಕೆ ಸೀಮಿತವಾಗಿರಲಿಲ್ಲ. ಬದಲಾಗಿ ಒಂದು ಮಹತ್ವದ ನಿರ್ಧಾರಕ್ಕೆ ಸಾಕ್ಷಿಯಾಯ್ತು. ಮದುವೆಯ ಸುಂದರ ಕ್ಷಣದಲ್ಲೇ ಈ ನವದಂಪತಿ ಸ್ವಯಂಪ್ರೇರಿತವಾಗಿ ಅಂಗಾಂಗ ದಾನಕ್ಕೆ ವಾಗ್ದಾನ ಮಾಡುವ ಮೂಲಕ ಮಾದರಿ ಆಗಿದ್ದಾರೆ.
ಸಾವಿನ ನಂತರ ಮಣ್ಣಲ್ಲಿ ಮಣ್ಣಾಗುವ ದೇಹ, ಹಲವು ಜನರಿಗೆ ಉಪಯೋಗಕ್ಕೆ ಬರಲಿ ಎಂದು ಮದುವೆ ದಿನವೇ ಅಂಗಾಂಗ ದಾನದ ಪ್ರತಿಜ್ಞೆಗೈದು, ಅದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಆರೋಗ್ಯ ಇಲಾಖೆ ವೆಬ್ಸೈಟಿನಲ್ಲಿ ನೋಂದಣಿ ಕಾರ್ಯ ಪೂರ್ಣ ಮಾಡಿದ್ದಾರೆ.
ಸಾಮಾನ್ಯವಾಗಿ ಕೆಲವರಲ್ಲಿ ಮೂಢನಂಬಿಕೆಗಳು ಆವರಿಸಿರುವ ಸಮಾಜದಲ್ಲಿ ಈ ಯುವ ದಂಪತಿಯ ಈ ನಿರ್ಧಾರ ನೆರೆದಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕುಟುಂಬಸ್ಥರು ಕೂಡ ಮಕ್ಕಳ ಈ ಸಮಾಜಮುಖಿ ನಿರ್ಧಾರಕ್ಕೆ ಬೆಂಬಲ ನೀಡಿದ್ದು ವಿಶೇಷವಾಗಿತ್ತು. ಜೊತೆಗೆ ದೇಶಿ ಹಸುಗಳ ರಕ್ಷಣೆಗಳ ಸಲುವಾಗಿ ದೇಶಿ ಹಸುಗಳ ಉತ್ಪನ್ನಗಳ ಪ್ರದರ್ಶನ ಕೂಡ ನಡೆಸಿದರು. ಮದುವೆಗೆ ಬಂದ ಅತಿಥಿಗಳಿಗೆ ದೇಶಿ ಹಸುಗಳಿಂದ ತಯಾರಿಸಿದ ಉತ್ಪನ್ನಗಳನ್ನು ಕೊಡುಗೆಯಾಗಿ ನೀಡಿದರು.
ಇದೇ ಸಂದರ್ಭದಲ್ಲಿ ಮದುಮಗ ವಾಗೀಶ ಗುರುಮೂರ್ತಯ್ಯ ಕಾಡದೇವರಮಠ ಮಾತನಾಡಿ, ‘ಗೋವಿಗೆ ವೀರಶೈವರಲ್ಲಿ ಉನ್ನತ ಸ್ಥಾನವನ್ನು ನೀಡಲಾಗಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಗೋವಿಗೆ ಮೊದಲನೆ ಆದ್ಯತೆ. ದಿನದಿಂದ ದಿನಕ್ಕೆ ಗೋವುಗಳ ಸಂಖ್ಯೆ ಕಡಿಮೆ ಆಗುತ್ತಿರುವ ಜೊತೆಗೆ ಈಗಿನ ಪೀಳಿಗೆಗೆ ಗೋವಿನ ಮಹತ್ವ ಗೊತಿಲ್ಲ. ಹೀಗಾಗಿ, ಸಮಾಜದಲ್ಲಿ ದೇಶಿ ಆಕಳು ರಕ್ಷಣೆ ಜೊತೆಗೆ ಅದರ ಉಪಯೋಗದ ಬಗ್ಗೆ ಮದುವೆಯಲ್ಲಿ ಜಾಗೃತಿ ಮೂಡಿಸಲಾಯಿತು’ ಎಂದಿದ್ದಾರೆ.






